ರಬಕವಿ/ಬನಹಟ್ಟಿ: ನವರಸಗಳ ಅಭಿವ್ಯಕ್ತಿಯೇ ಭರತ ನಾಟ್ಯದ ಜೀವಾಳವಾಗಿದೆ. ನಾದ, ಲಯ, ಹಾವ ಮತ್ತು ಭಾವಗಳ ಮೂಲಕ ಕೃಷ್ಣ ವಂದನೆ, ಸರಸ್ವತಿ ವಂದನೆ ಮತ್ತು ಕೃಷ್ಣನ ಬಾಲಲೀಲೆಗಳನ್ನು ಪುಣೆಯ ಸುಚೇತಾ ಚಾಪೇಕರ್ ಮತ್ತು ತಂಡದವರು ಯಶಸ್ವಿಯಾಗಿ ಪ್ರದರ್ಶಿಸಿದರು ಎಂದು ಸಂಗೀತ ತಜ್ಞ ಸಿದ್ದರಾಜ ಪೂಜಾರಿ ತಿಳಿಸಿದರು.
ಸಮೀಪದ ಯಲ್ಲಟ್ಟಿಯ ಕೊಣ್ಣೂರ ವಿಜ್ಞಾನ ಪಪೂ ಕಾಲೇಜಿನ ಆವರಣದಲ್ಲಿ ಪುಣೆಯ ಡಾ.ಸುಚೇತಾ ಚಾಪೇಕರ್ ಮತ್ತು ಕಲಾವರ್ಧಿನಿ ತಂಡದವರು ಇತ್ತೀಚೆಗೆ ಹಮ್ಮಿಕೊಂಡಿದ್ದ ಭರತ ನಾಟ್ಯ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ಮತ್ತು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಎರಡು ಪದ್ಧತಿಗಳಲ್ಲಿ ಭರತ ನಾಟ್ಯವನ್ನು ಪ್ರದರ್ಶನ ಮಾಡಿದರು. ಇದೊಂದು ವಿಶೇಷ ಮಾದರಿಯ ಭರತ ನಾಟ್ಯವಾಗಿತ್ತು ಎಂದರು.
ಶಾಸಕ ಸಿದ್ದು ಸವದಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಾಚಾರ್ಯ ಬಸವರಾಜ ಕೊಣ್ಣೂರ, ಚೇರ್ಮನ್ ದೀಪಾ ಕೊಣ್ಣೂರ, ಜ್ಯೋತಿ ಪಾಟೀಲ, ಡಾ.ಪ್ರಭುಗೌಡ ಪಾಟೀಲ, ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ವೆಂಕಟೇಶ ನಿಂಗಸಾನಿ, ಶ್ರೀಶೈಲ ಉಳ್ಳಾಗಡ್ಡಿ, ಭುಜಬಲಿ ಕೆಂಗಾಲಿ, ಬಾಹುಬಲಿ ಯಲಗುದ್ರಿ ಇತರರಿದ್ದರು.
ಡಾ.ಸುಚೇತಾ ಚಾಪೇಕರ್ ಮತ್ತು ತಂಡದವರು ಎರಡು ಗಂಟೆ ಭರತ ನಾಟ್ಯ ಪ್ರದರ್ಶಿಸಿದರು. ಡಾ.ಸುಚೇತಾ ಚಾಪೇಕರ್ ಅವರ ಮಗಳು ಆರುಂಧತಿ ಮತ್ತು ಮೊಮ್ಮಗಳು ಸಾಗರಿಕಾ ಕೃಷ್ಣನ ಬಾಲಲೀಲೆ ಕುರಿತ ನೃತ್ಯ ಎಲ್ಲರ ಮೆಚ್ಚಿಗೆ ಪಡೆಯಿತು.