| ಗಂಗಾಧರ್ ಬೈರಾಪಟ್ಟಣ ರಾಮನಗರ
ಸರ್ಕಾರ ಬೆಂಬಲ ಬೆಲೆಯಲ್ಲಿ ಖರೀದಿಸಿರುವ ರಾಗಿಗೆ ಕಳೆದ ಎರಡು ತಿಂಗಳಿಂದಲೂ ಹಣ ಸಂದಾಯವಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರನ್ನು ರಾಗಿ ಬೆಳೆಯಲು ಉತ್ತೇಜಿಸಿ ಬೆಂಬಲ ಬೆಲೆಯಡಿ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಮೂಲಕ ಪ್ರತಿ ವರ್ಷ ರಾಗಿ ಖರೀದಿ ಮಾಡುತ್ತಿದೆ. ಆದರೆ, ಈ ಬಾರಿ ರಾಗಿ ಖರೀದಿ ಹಣವನ್ನು ರೈತರ ಖಾತೆಗೆ ಜಮೆ ಮಾಡದೇ ಇರುವುದರಿಂದ ಹಣಕ್ಕಾಗಿ ಪ್ರತಿ ದಿನ ರೈತರು ಕಚೇರಿಗೆ ಅಲೆಯುವಂತಾಗಿದೆ.
ಸರ್ಕಾರದಿಂದ ಹಣ ಬಂದಿಲ್ಲ: ನೇರವಾಗಿ ರೈತರ ಖಾತೆಗೆ ಹಣ ಸಂದಾಯವಾಗಬೇಕಿದ್ದು, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡದೇ ಇರುವುದು ಇಷ್ಟೆಲ್ಲಾ ಸಂಕಷ್ಟಕ್ಕೆ ಕಾರಣವಾಗಿದೆ. 2021ರ ಮಾ.10ರವರೆಗೆ ಆನ್‌ಲೈನ್ ನೋಂದಣಿ ಮಾಡಿಸಿ ರಾಗಿ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಿದ್ದು, ನಂತರ ಮಾರಾಟ ಮಾಡಿದ ಯಾವುದೇ ರೈತರಿಗೆ ಹಣ ಬಿಡುಗಡೆಯಾಗಿಲ್ಲ ಎನ್ನುವುದು ಕೆಎಸ್‌ಎ್ಸಿ ಅಧಿಕಾರಿಗಳ ಸಮಜಾಯಿಷಿ. ಸರ್ಕಾರ ಪ್ರತಿ ಕ್ವಿಂಟಾಲ್ ರಾಗಿಯನ್ನು ಬೆಂಬಲ ಬೆಲೆಯಡಿ 3300 ರೂ.ಗಳಿಗೆ ಖರೀದಿ ಮಾಡುತ್ತಿದ್ದು, ಚೀಲಕ್ಕೆ ಪ್ರತ್ಯೇಕವಾಗಿ 22 ರೂ.ಗಳನ್ನು ನೀಡುತ್ತಿದೆ.
ಪ್ರತಿಭಟನೆ ಹಾದಿ: ಜಿಲ್ಲೆಯಲ್ಲಿ ರೈತರು ರಾಗಿ ಖರೀದಿ ಹಣಕ್ಕಾಗಿ ಒತ್ತಾಯಿಸಿ ಹೋರಾಟಕ್ಕೆ ಇಳಿದಿದ್ದು, ಪ್ರತಿ ದಿನ ಒಂದಿಲ್ಲೊಂದು ರಾಗಿ ಖರೀದಿ ಕೇಂದ್ರಕ್ಕೆ ಮುತ್ತಿಗೆ ಹಾಕಿ ತಮ್ಮ ಹಣಕ್ಕೆ ಬೇಡಿಕೆ ಇಡುತ್ತಿದ್ದಾರೆ. ಆದರೆ, ಕರೊನಾ ಸಂದರ್ಭದಲ್ಲಿ ಪದೇಪದೆ ಹಣಕ್ಕಾಗಿ ಕಚೇರಿ ಅಲೆಯುವುದರಿಂದ ರೈತರಿಗೂ ಸೋಂಕು ತಗುಲುವ ಭೀತಿ ಇದೆ. ಇದರ ಬಗ್ಗೆ ಅರಿವಿದ್ದರೂ ಅಧಿಕಾರಿಗಳು ಏನೂ ಮಾಡಲಾಗದ ಸ್ಥಿತಿಗೆ ತಲುಪಿದ್ದು, ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ.
ನಮಗೆ ಹಣ ನೀಡಿ: ಮಧ್ಯವರ್ತಿಗಳ ಹಾವಳಿ ಮತ್ತು ಅಧಿಕಾರಿಗಳ ಕಿರುಕುಳ ತಪ್ಪಿಸುವ ಸಲುವಾಗಿ ರೈತರ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುವ ಆನ್‌ಲೈನ್ ವ್ಯವಸ್ಥೆ ಜಾರಿಗೆ ಬಂದಿದೆ. ಇದರಿಂದ ಸಾಕಷ್ಟು ರೈತರಿಗೆ ಅನುಕೂಲವಾಗಿದೆ. ರಾಗಿ ಮಾರಾಟ ಮಾಡಿ ಹಲವಾರು ತಿಂಗಳುಗಳು ಕಳೆದರೂ ಹಣ ಸಿಗದಿರುವುದರಿಂದ ಕರೊನಾ ಸಂಕಷ್ಟದಲ್ಲಿ ರೈತರು ಕಂಗಾಲಾಗಿದ್ದಾರೆ.
ಹಣಕ್ಕಾಗಿ ಕಾದು ಕುಳಿತ ಅನ್ನದಾತರು :ಜಿಲ್ಲೆಯ ಸುಮಾರು 500ಕ್ಕೂ ಹೆಚ್ಚು ರೈತರಿಗೆ ಹಣ ಸಂದಾಯವಾಗಿಲ್ಲ ಎನ್ನಲಾಗಿದೆ. ಮಾ.10ರ ನಂತರ ರಾಗಿ ಮಾರಾಟ ಮಾಡಿದ ರೈತರಿಗೆ ಹಣ ಸಂದಾಯವಾಗಿಲ್ಲ. ಬಹುತೇಕ ರೈತರು ಈ ಹಣಕ್ಕಾಗಿ ಕಾಯುತ್ತಾ ಕುಳಿತಿದ್ದಾರೆ. ರೈತರು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದು, ಪೂರ್ವ ಮುಂಗಾರು ಮತ್ತು ಮುಂಗಾರು ಬೆಳೆಗಳಿಗೆ ಬೇಕಾದ ಬಿತ್ತನೆ ಬೀಜ ಖರೀದಿ, ಉಳುಮೆ ಸೇರಿ ಇತರ ಕೃಷಿ ಚಟುವಟಿಕೆಗಳಿಗೆ ಹಣದ ಅಗತ್ಯವಿದೆ.
ಮಾ.10ರ ನಂತರ ಖರೀದಿ ಮಾಡಿದ ರಾಗಿಗೆ ಸರ್ಕಾರದಿಂದ ಹಣ ಬಿಡುಗಡೆ ಆಗಿದೆ. ಇದು ರಾಮನಗರ ಸಮಸ್ಯೆ ಅಲ್ಲ, ಎಲ್ಲ ಕಡೆಯೂ ಹೀಗೆ ಆಗಿದೆ. ಹಣವನ್ನು ಸರ್ಕಾರವೇ ರೈತರ ಖಾತೆಗೆ ನೇರವಾಗಿ ಹಾಕಲಿದೆ. ಎಚ್.ಆರ್.ಜಯಣ್ಣ, ಕೆಎಫ್‌ಸಿಎಸ್‌ಸಿ ಅಧಿಕಾರಿ 20 ಕ್ವಿಂಟಾಲ್ ರಾಗಿ ಮಾರಾಟ ಮಾಡಿ 2 ತಿಂಗಳು ಕಳೆಯುತ್ತಿದ್ದರೂ ನನಗೆ ಹಣ ಬಂದಿಲ್ಲ. ಈ ಬಗ್ಗೆ ಕೇಳಿದರೆ ಅಧಿಕಾರಿಗಳು ಏನನ್ನೂ ಸರಿಯಾಗಿ ಹೇಳುತ್ತಿಲ್ಲ. ಕೃಷಿಯನ್ನೇ ಅವಲಂಬಿಸಿರುವ ನಾವು ಮತ್ತೆ ಕೃಷಿ ಮಾಡಬೇಕಾದರೆ ನಮಗೆ ಹಣ ಬೇಕೇಬೇಕು. ಸರ್ಕಾರ ಕೂಡಲೇ ನಮ್ಮ ಹಣ ನೀಡಲಿ. ಬಾನಂದೂರು ನಂಜುಂಡಿ, ರೈತ, ರಾಮನಗರ