ಜಿಲ್ಲೆ

ನಿನಗೆ ಹೆರಿಗೆ ಮಾಡ್ತಿಸ್ತೇನೆ ಎಂದು ಮಹಿಳಾ ಪತ್ರಕರ್ತೆಗೆ ಹೇಳಿದ ದೇಶಪಾಂಡೆ-ಹಿಗ್ಗಾ ಮುಗ್ಗಾ ತರಾಟೆ

ಕಾರವಾರ: ಉತ್ತರ ಕನ್ನಡ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬಗ್ಗೆ ಮಹಿಳಾ ಪತ್ರಕರ್ತೆ ಕೇಳಿದ ಪ್ರಶ್ನೆಗೆ ಕಾಂಗ್ರೆಸ್ ಹಿರಿಯ ನಾಯಕ ಆರ್.ವಿ.ದೇಶಪಾಂಡೆ ಹೇಳಿಕೆ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಹೇಳಿಕೆ ನೀಡಿದ್ದು, ಕಾಂಗ್ರೆಸ್ ಮಹಿಳಾ ವಿರೋಽ ಧೋರಣೆಯನ್ನು ಶಾಸಕರ ಹೇಳಿಕೆ ತೋರಿಸುತ್ತದೆ. ಸಮಸ್ಯೆ ಹೇಳಿಕೊಂಡು ಬರುವ ಮಹಿಳೆಯ ದುಪ್ಪಟ್ಟಾ ಎಳೆಯುವ ಮುಖ್ಯಮಂತ್ರಿ ಒಂದೆಡೆಯಾದರೆ ಸಮಸ್ಯೆ ಕುರಿತು ಪ್ರಶ್ನಿಸುವ ಮಹಿಳಾ ಪರ್ತಕರ್ತೆಯರಿಗೆ ಉಡಾಫೆ ಉತ್ತರ ನೀಡುವ ಶಾಸಕರು ಇನ್ನೊಂದು ಕಡೆಯಾಗಿದ್ದಾರೆ. ರಾಜ್ಯದಲ್ಲಿ ಮೂಲಭೂತ ಅವಶ್ಯಕತೆ ಕೇಳೋದು ತಪ್ಪಾ ಎಂದು ಬಿಜೆಪಿ ಪ್ರಶ್ನಿಸಿದೆ.

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಯಡಿಯೂರಪ್ಪ ಕೂಡ ಈ ಕುರಿತು ಮಾತನಾಡಿದ್ದು, `ದೇಶಪಾಂಡೆ ಅವರು ಆಡಿರುವ ಮಾತು, ಅವರ ವಯಸ್ಸು, ಅನುಭವ ಹಾಗೂ ಘನತೆಗೆ ತಕ್ಕುದಲ್ಲ. ಸ್ತ್ರೀ ಕುಲವನ್ನು ಅವಹೇಳನ ಮಾಡುವ ರೀತಿಯಲ್ಲಿ ಉದ್ಘರಿಸುವ ಅವರ ಮಾತು ನಾಗರಿಕ ಸಮಾಜ ಎಂದಿಗೂ ಒಪ್ಪಲಾಗದು. ಈ ಸಂಬಂಧ ಆರ್.ವಿ.ದೇಶಪಾಂಡೆ ಅವರು ತಮ್ಮ ಹೇಳಿಕೆಯನ್ನು ವಾಪಸ್ ಪಡೆದು, ಮಹಿಳಾ ಸಮುದಾಯದ ಕ್ಷಮೆ ಯಾಚಿಸಲಿ ಎಂದಿದ್ದಾರೆ.

ರೂಪಾಲಿ ನಾಯ್ಕ ವಿರೋಧ

ಹಿರಿಯ ರಾಜಕಾರಣಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರು, ಹಳಿಯಾಳ ಶಾಸಕರೂ ಆದ ಆರ್.ವಿ.ದೇಶಪಾಂಡೆ ಅವರು ಮಹಿಳೆಯರಿಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷೆ ರೂಪಾಲಿ ಎಸ್.ನಾಯ್ಕ ಆಕ್ಷೇಪಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಆರ್.ವಿ.ದೇಶಪಾಂಡೆ ರಾಜಕೀಯ ಸಾಮಾಜಿಕ ಜೀವನದಲ್ಲಿ ಅಪಾರ ಅನುಭವ ಇರುವವರು. ಜಿಲ್ಲೆಯ ಜ್ವಲಂತ ಸಮಸ್ಯೆ ಬಗ್ಗೆ ಹಿರಿಯ ಪತ್ರಕರ್ತೆಯೊಬ್ಬರು ಪ್ರಶ್ನಿಸಿದಾಗ ಅದಕ್ಕೆ ಸಮಂಜಸವಾದ ಉತ್ತರ ನೀಡಬೇಕಿತ್ತು. ನಾನೂ ಒಬ್ಬ ಮಹಿಳೆಯಾಗಿ ದೇಶಪಾಂಡೆ ಅವರು ನೀಡಿರುವ ಉತ್ತರವನ್ನು ಖಂಡಿಸುತ್ತೇನೆ.

ಅಷ್ಟಕ್ಕೂ ಜಿಲ್ಲೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎನ್ನುವ ಬೇಡಿಕೆ ಬಹು ಹಿಂದಿನದ್ದು. ಜಿಲ್ಲೆಯ ಜನತೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದೆ ಬೇರೆ ಬೇರೆ ಜಿಲ್ಲೆಯನ್ನು ಅವಲಂಬಿಸಿರುವಂತಾಗಿದೆ. ಇಂತಹ ಸಂದರ್ಭದಲ್ಲಿ ಪ್ರಭಾವಿ ನಾಯಕರಾದ ಆರ್.ವಿ.ದೇಶಪಾಂಡೆ ಈ ರೀತಿ ಹೇಳಿರುವುದು ಶೋಭೆ ತರದು ಎಂದು ರೂಪಾಲಿ ಎಸ್.ನಾಯ್ಕ ತಿಳಿಸಿದ್ದಾರೆ.

ಸಿಪಿಐಎಂ ಖಂಡನೆ

ಆರ್.ವಿ.ದೇಶಪಾಂಡೆ ಹೇಳಿಕೆಯನ್ನು ಸಿಪಿಐಎಂ ಖಂಡಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಯಮುನಾ ಗಾಂವಕರ್, ಮಹಿಳಾ ಪತ್ರಕರ್ತೆಯ ಪ್ರಶ್ನೆಗೆ ಬಹಳ ಹಗುರವಾದ ಮತ್ತು ಮಹಿಳೆಯರ ಸ್ವಾಭಿಮಾನಕ್ಕೆ ಧಕ್ಕೆ ತರುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ .

ದೇಶಪಾಂಡೆಯವರು ಇಷ್ಟು ಹಿರಿಯ ರಾಜಕಾರಣಿಯಾಗಿ ಒಂಬತ್ತು ಬಾರಿ ಶಾಸಕರಾಗಿ ಸಾಂವಿಧಾನಿಕವಾಗಿ ಮತ್ತು ಲಿಂಗ ಸೂಕ್ಷ÷್ಮತೆಯ ಬಗ್ಗೆ ಇನ್ನೊಬ್ಬರಿಗೆ ಪಾಠ ಹೇಳುವ ಸ್ಥಾನದಲ್ಲಿದ್ದುವರು. `ಹಳಿಯಾಳದಲ್ಲಿ ನಿನಗೆ ಹೆರಿಗೆ ಮಾಡಿಸುತ್ತೇನೆ' ಎಂದು ಜವಾಬ್ದಾರಿ ರಹಿತ ಮನಸ್ಥಿತಿಯಿಂದ ಮಾತಾಡಿದ್ದ ವಿಡಿಯೋ ಹರಿದಾಡುತ್ತಿದೆ. ಇವರ ಮಾತು ಹಲವು ಅಸೂಕ್ಷ್ಮ ಸ್ತ್ರೀವಿರೋಧಿ ಪಾಳೆಗಾರಿ ಯಾಜಮಾನ್ಯದ ರಾಜಕಾರಣಿಗಳಲ್ಲಿ ಇರುವುದರ ಪ್ರತಿಬಿಂಬದAತಿದೆ.

ಮಾತ್ರವಲ್ಲ, ಜಿಲ್ಲೆಯ ಜನ ಜೀವನ ರಕ್ಷಣೆಗಾಗಿ ಎಷ್ಟೊಂದು ವರ್ಷಗಳಿಂದ ಬಹುಸುಸಜ್ಜಿತ ಆಸ್ಪತ್ರೆಗಾಗಿ ಹೋರಾಟ ನಡೆಯುತ್ತಿದ್ದರೂ ಅದರ ಈಡೇರಿಕೆಗಾಗಿ ಹಿರಿಯ ರಾಜಕಾರಣಿಗಳಾದ ತಮ್ಮ ಪ್ರಯತ್ನ ಸ್ವಲ್ಪವೂ ಸಾಕಾಗದು ಎಂದು ಅವರು ಹೇಳಿದ್ದಾರೆ.

ಆರ್‌ವಿಡಿ ಹೇಳಿದ್ದೇನು..?

`ಉತ್ತರ ಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲ. ನೆರೆ ಬಂದರೆ ಹೆರಿಗೆ ಮಾಡಿಸಲೂ ಕಷ್ಟವಾದ ಪರಿಸ್ಥಿತಿ ಜಿಲ್ಲೆಯಲ್ಲಿದೆ ಏನು ಮಾಡುತ್ತೀರಿ..?' ಎಂದು ಮಹಿಳಾ ಪತ್ರಕರ್ತೆ ಆರ್‌ವಿಡಿ ಅವರನ್ನು ಜೊಯಿಡಾದ ಸೂಪಾದಲ್ಲಿ ಆಯೋಜನೆಯಾಗಿದ್ದ ಕಾರ್ಯಕ್ರಮದಲ್ಲಿ ಪ್ರಶ್ನಿಸಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ದೇಶಪಾಂಡೆ `ನಿನ್ನ ಹೆರಿಗೆ ಬೇಕಾದ್ರೆ ಮಾಡಿಸ್ತೇನೆ' ಎಂದಿದ್ದರು. ನಮ್ಮದೆಲ್ಲ ಮುಗಿದಿದೆ. ಜನರಿಗೆ ಅನುಕೂಲ ಮಾಡಿಕೊಡಿ ಎಂದು ಮಹಿಳಾ ಪತ್ರಕರ್ತೆ ಮನವಿ ಮಾಡಿದ್ದರು.

ಪ್ರತಿಭಟನೆ ಇಂದು

ಕಾಂಗ್ರೆಸ್ ಶಾಸಕ ಆರ್.ವಿ. ದೇಶಪಾಂಡೆ ಹೇಳಿಕೆಯನ್ನು ಖಂಡಿಸಿ ಸೆ.5  ರಂದು ಹಳಿಯಾಳದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಸಿ.ಮಂಜುಳಾ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮಹಿಳಾ ಪತ್ರಕರ್ತೆ ರಾಧಾ ಹಿರೇಗೌಡರ್ ಅವರು ಕೇಳಿದ ಪ್ರಶ್ನೆಗೆ ಅವಮಾನಿಸಿರುವುದು ಖಂಡನೀಯ. ಕೂಡಲೇ ಅವರು ಕ್ಷಮೆ ಯಾಚಿಸಬೇಕು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ. ತುಂಬಾ ಹಗುರವಾಗಿ ಮತ್ತು ಅವಮಾನದ ರೀತಿಯಲ್ಲಿ `ನಿನಗೆ ಬೇಕಾದರೆ ಹೆರಿಗೆ ಮಾಡಿಸ್ತೀನಿ' ಎಂದು ಹೇಳುವಷ್ಟು ಒಂದು ಕೀಳು ಅಭಿರುಚಿಯನ್ನು ವ್ಯಕ್ತಪಡಿಸಿರುವುದು ಅತ್ಯಂತ ಖಂಡನೀಯ ಎಂದಿದ್ದಾರೆ.