ಜಿಲ್ಲೆ

ಕ್ರಿಕೆಟ್​ ಆಡುತ್ತಿರುವಾಗಲೇ ಕುಸಿದು ಬಿದ್ದ ಯುವಕ ಸಾವು: ಮುಗಿಲು ಮುಟ್ಟಿದ ಪಾಲಕರ ಆಕ್ರಂದನ

ಉಡುಪಿ: ಕ್ರಿಕೆಟ್​ ಆಡುತ್ತಿದ್ದ ವೇಳೆ ಯುವಕನೊಬ್ಬ ಕುಸಿದು ಬಿದ್ದು ಸಾವಿಗೀಡಾಗಿರುವ ಮನಕಲಕುವ ಘಟನೆ ಕಾರ್ಕಳ ತಾಲೂಕಿನ ನಂದಳಿಕೆ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.

ಸುಕೇಶ್​ ಮೃತ ದುರ್ದೈವಿ. ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸುಕೇಶ್, ಕೆಲ ದಿನಗಳ ಹಿಂದೆ ಊರಿಗೆ ಬಂದಿದ್ದರು. ಎಂದಿನಂತೆಯೇ ಊರಿನ ಸ್ನೇಹಿತರ ಜತೆಗೂಡಿ ಕ್ರಿಕೆಟ್​ ಆಡುತ್ತಿದ್ದರು.

ಬೌಲಿಂಗ್​ ಮಾಡುವಾಗ ಎದೆ ನೋವು ಕಾಣಿಸಿಕೊಂಡು ಸುಕೇಶ್​ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸಲು ಸುಕೇಶ್​ ಅವರನ್ನು ಕರೆದೊಯ್ಯುವಾಗ ಮಾರ್ಗಮಧ್ಯೆಯೇ ಅವರು ಅಸುನೀಗಿದ್ದಾರೆ. ಸುಕೇಶ್​ಗೆ ಹೃದಯಾಘಾತ ಆಗಿದೆ ಎಂದು ಹೇಳಲಾಗಿದೆ.

ಸುಕೇಶ್​ ಅಕಾಲಿಕ ಮರಣದಿಂದ ಇದೀಗ ನಂದಳಿಕೆ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಆಳೆತ್ತರ ಬೆಳೆದು ಮನೆಗೆ ಆಸರೆಯಾಗಿದ್ದ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. (ದಿಗ್ವಿಜಯ ನ್ಯೂಸ್​)