ಜಿಲ್ಲೆ

ಸಹಕಾರ ಧುರೀಣ ವೆಂಕಟೇಶ್​ಗೆ ವಿಜಯರತ್ನ: ವಿಜಯವಾಣಿ, ದಿಗ್ವಿಜಯ ನ್ಯೂಸ್ ವಾಹಿನಿಯ ಪ್ರತಿಷ್ಠಿತ ಗೌರವ ಪ್ರದಾನ

ಬೆಂಗಳೂರು: ಕನ್ನಡ ಮತ್ತು ಜನಸೇವೆಯನ್ನು ನಿರಂತರವಾಗಿ ಮಾಡಿಕೊಂಡು ಬರುತ್ತಿರುವ ಸಾಧಕ ಡಾ.ಎಂ.ಆರ್. ವೆಂಕಟೇಶ್ ಅವರಿಗೆ ಕನ್ನಡದ ನಂ.1 ದಿನಪತ್ರಿಕೆ ‘ವಿಜಯವಾಣಿ’ ಹಾಗೂ ದಿಗ್ವಿಜಯ 24x7 ನ್ಯೂಸ್ ವಾಹಿನಿಯ ಪ್ರತಿಷ್ಠಿತ ‘ವಿಜಯರತ್ನ -2022’ ಪ್ರಶಸ್ತಿ ಪ್ರದಾನ ಮಾಡಲಾಯಿತು.

ನಾಡಿನಾದ್ಯಂತ ಶಿಕ್ಷಣ, ಉದ್ಯಮ, ಆರೋಗ್ಯ, ಪರಿಸರ ಕಾಳಜಿ, ಸಮಾಜ ಸೇವೆ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 42 ಸಾಧಕರಿಗೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಸಮಾರಂಭಲ್ಲಿ ‘ವಿಜಯರತ್ನ-2022’ ಪ್ರಶಸ್ತಿ ಪ್ರದಾನ ಮಾಡಲಾಯಿತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್, ಚಿತ್ರನಟ ರಮೇಶ್ ಅರವಿಂದ್, ನಟಿ ಶರ್ವಿುಳಾ ಮಾಂಡ್ರೆ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ವಿಆರ್​ಎಲ್ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ಆನಂದ ಸಂಕೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಜಿ.ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.

ಹೋರಾಟದ ಹಾದಿಯಲ್ಲಿ ವೆಂಕಟೇಶ್: ಸದ್ಯ ಬಿಜೆಪಿ ಮಾಧ್ಯಮ ವಕ್ತಾರ ಹಾಗೂ ತ್ಯಾಗರಾಜ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷರಾಗಿರುವ ಡಾ.ಎಂ.ಆರ್. ವೆಂಕಟೇಶ್, ವಿದ್ಯಾರ್ಥಿ ದಿಸೆಯಿಂದಲೂ ಕನ್ನಡಪರ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತಿ ಚಿದಾನಂದ ಮೂರ್ತಿ, ನಟ ಅಶೋಕ್ ನೇತೃತ್ವದಲ್ಲಿ ಆರಂಭವಾದ ಕನ್ನಡ ಶಕ್ತಿ ಕೇಂದ್ರದ ಪದಾಧಿಕಾರಿಯಾಗಿದ್ದರು. ನಂತರ ಕನ್ನಡ ಸಾಹಿತ್ಯ ಪರಿಷತ್ತಿನ ಒಡನಾಟಕ್ಕೆ ಬಂದು ಅಲ್ಲಿ ಚಂಪಾ, ಡಾ.ನಲ್ಲೂರು ಪ್ರಸಾದ್, ಮಂಡ್ಯದ ಡಾ.ಜಯಪ್ರಕಾಶ್ ಗೌಡ, ಹಂಪ ನಾಗರಾಜಯ್ಯ, ಭೈರಮಂಗಲ ರಾಮೇಗೌಡ, ಮುಕುಂದರಾಜು, ನಾಡೋಜ ಡಾ.ಮಹೇಶ್ ಜೋಶಿ ಇನ್ನೂ ಅನೇಕ ಹಿರಿಯ ಸಾಹಿತಿಗಳ ಒಡನಾಟ ಇಟ್ಟುಕೊಂಡಿದ್ದರು. ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಯಾಗಿ, ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ, ಕಸಾಪ ತಾಲೂಕು ಘಟಕದ ಅಧ್ಯಕ್ಷನಾಗಿ ಕನ್ನಡ ಕಟ್ಟುವಂತಹ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿದ್ದಾರೆ.

ಸಾಮಾಜಿಕ ಕಾರ್ಯಗಳು: ಭಾರತೀಯ ವಿಕಾಸ ಕೇಂದ್ರದ ಪ್ರಧಾನ ಸಂಚಾಲಕರಾಗಿ ಡಾ. ವೆಂಕಟೇಶ್ ಕಾರ್ಯ ನಿರ್ವಹಿಸಿದ್ದಾರೆ. ಹಸಿರು ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿ ಪರಿಸರಕ್ಕೆ ಸಂಬಂಧಿಸಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ರಾಜ್ಯ ಒಕ್ಕಲಿಗರ ಒಕ್ಕೂಟ ರಾಜ್ಯಾಧ್ಯಕ್ಷನಾಗಿ ಸಮುದಾಯದ ವಿದ್ಯಾರ್ಥಿಗಳಿಗೆ, ಗ್ರಾಮೀಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುವ ಕಾರ್ಯಕ್ರಮವನ್ನು ಪ್ರತಿವರ್ಷವೂ ಮಾಡಿಕೊಂಡು ಬರುತ್ತಿದ್ದಾರೆ. ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಶಾಶ್ವತ ನೀರಾವರಿಗಾಗಿ ನಡೆದ ಹೋರಾಟಳಲ್ಲಿಯೂ ಸಕ್ರಿಯವಾಗಿದ್ದರು.

ಸಹಕಾರ ಕ್ಷೇತ್ರದ ಕೊಡುಗೆಗಳು: 20 ವರ್ಷಗಳಿಂದ ಸಹಕಾರ ಕ್ಷೇತ್ರದ ವಿವಿಧ ಹಂತಗಳಲ್ಲಿ (ಯುಸಿಬಿ, ಕ್ರೆಡಿಟ್, ಹೌಸಿಂಗ್, ಪ್ರಾಥಮಿಕ ಹಾಲು ಸಹಕಾರ ಸಂಘಗಳು) ಸಕ್ರಿಯವಾಗಿರುವ ಡಾ.ವೆಂಕಟೇಶ್, ಸಹಕಾರ ಕ್ಷೇತ್ರ ಬಲವರ್ಧನೆಗೆ ಶ್ರಮಿಸಿದ್ದಾರೆ. ವಿವಿಧ ಜಿಲ್ಲೆಗಳಿಗೆ ಪ್ರವಾಸ ಮಾಡಿ ಹಾಲು ಉತ್ಪಾದಕ ಪ್ರಾಥಮಿಕ ಸಹಕಾರ ಸಂಘಗಳ ಸ್ಥಿತಿ-ಗತಿ ಬಗ್ಗೆ ಅನುಭವ ಪಡೆದಿದ್ದಾರೆ.

2001ರಲ್ಲಿ ಬಿಜೆಪಿ ಸೇರ್ಪಡೆ 2001ರಲ್ಲಿ ಅಂದಿನ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ದಿ. ಅನಂತಕುಮಾರ್ ಹಾಗೂ ಶಾಸಕರಾಗಿದ್ದ ಆರ್.ಅಶೋಕ್ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು. 1992-93ರಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಒಡನಾಟ ಬೆಳೆಸಿಕೊಂಡಿದ್ದಾರೆ. ಬೆಂಗಳೂರು ನಗರ ಜಿಲ್ಲಾ ಉಪಾಧ್ಯಕ್ಷರಾಗಿ ಎರಡು ಅವಧಿಯಲ್ಲಿ ಪಕ್ಷ ಸಂಘಟನೆಗೆ ಶ್ರಮದಾನ ಮಾಡಿದ್ದಾರೆ. ರಾಜ್ಯ ಬಿಜೆಪಿಯ ಹಾಲು ಉತ್ಪಾದಕರ ಪ್ರಕೋಷ್ಠದ ರಾಜ್ಯ ಸಂಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬಿಜೆಪಿಯ ಬೆಂಗಳೂರು ನಗರ ಜಿಲ್ಲೆ ಉಪಾಧ್ಯಕ್ಷರಾಗಿ ಎರಡು ಅವಧಿಗೆ ಕಾರ್ಯ ನಿರ್ವಹಿಸಿದ್ದಾರೆ.

ಸಾಹಿತ್ಯ ಪರಿಚಾರಿಕೆ, ಸಂಸ್ಕೃತಿ, ರಕ್ಷಣೆ, ಜನಸೇವೆ, ಹೋರಾಟ ಮತ್ತು ಸಂಘಟನೆ ನನ್ನ ಜೀವಾಳ. ಯಾವುದೇ ಅಪೇಕ್ಷೆ ಇಟ್ಟುಕೊಳ್ಳದೇ ನಿರಂತರವಾಗಿ ಸಮಾಜ ಸೇವೆ ಮಾಡಿಕೊಂಡು ಬಂದಿದ್ದೇನೆ. ಇನ್ನು ಮುಂದೆಯೂ ನನ್ನ ಸಮಾಜ ಸೇವೆ ಮುಂದುವರಿಯಲಿದೆ. | ಡಾ. ಎಂ.ಆರ್.ವೆಂಕಟೇಶ್, ಬಿಎಂಟಿಸಿ ಮಾಜಿ ಉಪಾಧ್ಯಕ್ಷ

ಬಿಎಂಟಿಸಿ ಉಪಾಧ್ಯಕ್ಷರಾಗಿ ಸಾಧನೆ ಬಿಎಂಟಿಸಿ ಉಪಾಧ್ಯಕ್ಷರಾಗಿದ್ದ ಅವಧಿಯಲ್ಲಿ ಕೇಂದ್ರ ಸರ್ಕಾರದ ಯೋಜನೆಯ ಸಮರ್ಪಕ ಅನುಷ್ಠಾನದಡಿ ಸೌರ ವಿದ್ಯುತ್ ಅಳವಡಿಕೆಯಿಂದ 25 ಡಿಪೋಗಳು ಮತ್ತು 2 ವರ್ಕ್ ಶಾಪ್​ಗಳ ವ್ಯಾಪ್ತಿಯಲ್ಲಿ ಪ್ರತಿ ತಿಂಗಳ ವಿದ್ಯುತ್ ಬಿಲ್ ಅನ್ನು 12 ಲಕ್ಷ ರೂ.ಗೂ ಹೆಚ್ಚು ಉಳಿತಾಯ ಮಾಡಿ, ಉಳಿಕೆ ಉತ್ಪಾದಿತ ಸೌರ ವಿದ್ಯತ್ ಅನ್ನು ಗ್ರಿಡ್​ಗೆ ಸ್ಥಳಾಂತರಿಸಿ ಲಾಭ ಗಳಿಸುವಲ್ಲಿ ಸಫಲರಾಗಿದ್ದರು. ಪ್ರಸ್ತುತ ಸಂಸ್ಥೆಯ ಒಟ್ಟಾರೆ ಹಿತದೃಷ್ಟಿಯಿಂದ ಬಿಎಂಟಿಸಿ ಸಾರಿಗೆ ಸೌಲಭ್ಯ ಜನಸ್ನೇಹಿಯಾಗಿರುವ ಹಿನ್ನೆಲೆಯಲ್ಲಿ ನಿಖರ ಅಂಕಿ-ಅಂಶಗಳೊಂದಿಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.

ಒಕ್ಕಲಿಗರ ಏಳ್ಗೆಗಾಗಿ ದುಡಿದವರು

ಡಾ. ಎಂ.ಆರ್. ವೆಂಕಟೇಶ್ ಅವರು ಒಕ್ಕಲಿಗ ಜನಾಂಗದ ಏಳ್ಗೆಗಾಗಿಯೂ ಸಾಕಷ್ಟು ದುಡಿದಿದ್ದಾರೆ. ಜನಾಂಗದ ಹಿತ ಕಾಯಲು ಒಕ್ಕಲಿಗ ಸಮುದಾಯದ ಹಿರಿಯರು, ಪ್ರಾಜ್ಞರು ಮತ್ತು ಗಣ್ಯರ ಸಲಹೆ ಮಾರ್ಗದರ್ಶನದಲ್ಲಿ ಪ್ರತ್ಯೇಕ ರಾಜ್ಯ ಒಕ್ಕಲಿಗರ ಒಕ್ಕೂಟ ಸಂಸ್ಥಾಪನೆ ಮಾಡಿ, ರಾಜ್ಯಾಧ್ಯಕ್ಷರಾಗಿ ಸಮುದಾಯ ಹಾಗೂ ಧರ್ಮಗುರುಗಳ ಸಾಮೀಪ್ಯದಲ್ಲಿ ಎರಡು ದಶಕಗಳ ಕಾಲ ಜನಾಂಗದ ಜಾಗೃತಿ-ಸಂಘಟನೆಗೆ ಪರಿಶ್ರಮ ಹಾಕಿದ್ದಾರೆ. ಸಮುದಾಯದ ಹಿರಿಯ ಸಾಧಕರಿಗೆ ಪ್ರತಿ ವರ್ಷ ಗೌರವಾರ್ಪಣೆ, ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ನಗದು ಬಹುಮಾನ ನೀಡುವ ರಾಜ್ಯ ಮಟ್ಟದ ಪ್ರತಿಭಾ ಪುರಸ್ಕಾರ ಮಾಡಿಕೊಂಡು ಬರುತ್ತಿದ್ದಾರೆ.