ನಾವು ಪ್ರತಿದಿನ ಬಳಸೋ ಪಾಲಿಷ್ ಮಾಡಿದ ಅಕ್ಕಿ, ಬ್ಲೀಚ್ ಮಾಡಿರೋ ಗೋಧಿ ಹಿಟ್ಟು ನಮ್ಮ ಹೊಟ್ಟೆ ಮಾತ್ರ ತುಂಬಿಸುತ್ತೆ ವಿನಃ ದೇಹಕ್ಕೆ ಬೇಕಾದ ಯಾವುದೇ ಪೌಷ್ಟಿಕಾಂಶ ಒದಗಿಸೋದಿಲ್ಲ. ಇವುಗಳ ಬದಲು ಸಿರಿಧಾನ್ಯಗಳ ಬಳಕೆಯಿಂದ ದೇಹದ ಆರೋಗ್ಯವನ್ನು ಅತ್ಯುತ್ತಮಗೊಳಿಸಬಹುದು.
ಹೌದು, ಸಿರಿಧಾನ್ಯಗಳಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕ ಸತ್ವಗಳಾದ ಮೆಗ್ನೀಷಿಯಂ, ತಾಮ್ರ, ಪಾಸ್ಪರಸ್ ಮತ್ತು ಮ್ಯಾಂಗನೀಸ್ ಅಂಶಗಳು ಸೇರಿವೆ. ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರೋ ಗೋಧಿಯಲ್ಲಿನ ಗ್ಲುಟೆನ್ ಅಂಶ ಇರೋದಿಲ್ಲ. ಹೀಗಾಗಿ ಮಧುಮೇಹಿಗಳ ಪಾಲಿಗೆ ಇದು ಒಂದು ಉತ್ತಮ ಆಹಾರವಾಗಬಲ್ಲದು. ಸಿರಿಧಾನ್ಯಗಳಲ್ಲಿನ ಅಂಶಗಳು ಮನುಷ್ಯನ ಆರೋಗ್ಯವನ್ನು ಸಮತೋಲನದಲ್ಲಿಟ್ಟು, ಹೃದಯದ ಸಮಸ್ಯೆಗಳು ಮಾತ್ರವಲ್ಲದೆ ಮಾರಕ ಕಾಯಿಲೆಗಳು ಬಾರದಂತೆ ತಡೆಯುತ್ತೆ.
ನಾವು ಪ್ರತಿ ದಿನ ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಸಿರಿಧಾನ್ಯಗಳಲ್ಲಿ ಬಹುತೇಕ ಎಲ್ಲಾ ಪೌಷ್ಟಿಕಾಂಶಗಳಿರುತ್ತವೆ. ಇನ್ನು ತೂಕ ಇಳಿಸೋಕೆ ಬಯಸುವವರಿಗೆ ಈ ಸಿರಿಧಾನ್ಯಗಳು ಬೆಸ್ಟ್ ಔಷಧವಾಗಿಯೇ ಕೆಲಸ ಮಾಡುತ್ತೆ. ದೇಹಕ್ಕೆ ಹೆಚ್ಚಿನ ಕ್ಯಾಲೊರಿ ಅಂಶಗಳು ಸೇರುತ್ತಾ ಹೋದರೆ ಆತನ ದೇಹದ ತೂಕ ಕೂಡ ಗಣನೀಯವಾಗಿ ಹೆಚ್ಚುತ್ತೆ. ಹೀಗಾಗಿ ನಾವು ಸೇವಿಸುವ ಆಹಾರದಲ್ಲಿ ಕ್ಯಾಲೋರಿಗಳು ಕಡಿಮೆ ಇರಬೇಕು. ಕೇವಲ ಸ್ವಲ್ಪ ಪ್ರಮಾಣದ ಸಿರಿಧಾನ್ಯಗಳ ಸೇವನೆಯಿಂದ ಹೊಟ್ಟೆ ತುಂಬಿದಾಗುತ್ತೆ. ಸಾಮಾನ್ಯ ಆಹಾರಗಳಾದ ಅನ್ನ ಮತ್ತು ಚಪಾತಿಗಳು ಬಹುಬೇಗನೆ ಜೀರ್ಣವಾಗಿ ಕೆಲವೇ ಗಂಟೆಗಳಲ್ಲಿ ಮತ್ತೊಮ್ಮೆ ಹಸಿವಾಗುತ್ತದೆ.ಮತ್ತೆ ಏನನ್ನಾದ್ರೂ ತಿನ್ನಬೇಕೆಂಬ ಬಯಕೆ ಮೂಡುತ್ತೆ. ಇದರಿಂದ ಪ್ರತಿ ದಿನದ ನಮ್ಮ ಆಹಾರ ಪದ್ಧತಿಯ ಸಮತೋಲನ ಕೈ ತಪ್ಪುತ್ತದೆ. ಇದು ಜೀರ್ಣ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿ ಆರೋಗ್ಯಕ್ಕಿಂತ ಅನಾರೋಗ್ಯವೇ ಹೆಚ್ಚಾಗುತ್ತದೆ. ಇನ್ನು ಸಿರಿಧಾನ್ಯಗಳ ಸೇವನೆಯಿಂದ ಜೀರ್ಣ ಪ್ರಕ್ರಿಯೆ ನಿಧಾನವಾಗಿ ಹೊಟ್ಟೆ ಹಸಿವು ಇಲ್ಲದಂತಾಗಿ ಸರಿಯಾದ ಸಮಯಕ್ಕೆ ಆಹಾರ ತಿನ್ನುವ ಅಭ್ಯಾಸ ರೂಢಿಯಾಗುತ್ತದೆ.
ಹಸಿವು ಕೂಡ ನೀಗಿದಂತಾಗಿ ದೇಹದಲ್ಲಿ ಶಕ್ತಿ ಪೂರೈಸುತ್ತೆ. ಸಿರಿಧಾನ್ಯಗಳಲ್ಲಿ ಕೊಬ್ಬಿನಾಂಶವೇ ಇಲ್ಲದಿರೋದ್ರಿಂದ ಮತ್ತೆ ತೂಕ ಹೆಚ್ಚಾಗೋ ಚಿಂತೆಯೇ ಇರೋದಿಲ್ಲ. ಪ್ರೊಟೀನ್ ಅಂಶದ ಕೊರತೆಯಿಂದಾಗಿ ದೇಹದಲ್ಲಿ ರೋಗನಿರೋಧಕ ಶಕ್ತಿ ಕುಗ್ಗುತ್ತೆ. ಹೀಗಾಗಿ ಆಗ್ಗಾಗ್ಗೆ ಆರೋಗ್ಯ ಹದಗೆಡುತ್ತಾ ನಾನಾ ರೋಗಗಳೂ ಆವರಿಸೋ ಸಾಧ್ಯತೆ ಹೆಚ್ಚು. ಇನ್ನು ಸಿರಿಧಾನ್ಯಗಳ ಸೇವನೆ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಪ್ರೊಟೀನ್ ನ ಆಗರವೆಂದೇ ಕರೆಸಿಕೊಳ್ಳೋ ಸಿರಿಧಾನ್ಯಗಳ ನಿಯಮಿತ ಸೇವನೆ ರೋಗನಿರೋಧಕ ಶಕ್ತಿ ಹೆಚ್ಚಿಸಿ , ಎಂಥಹ ಮಾರಕ ಕಾಯಿಲೆಯ ವಿರುದ್ಧವೂ ಹೋರಾಡುವಂತಹ ಶಕ್ತಿ ನೀಡುತ್ತೆ.
ಮಧುಮೇಹಿಗಳಿಗೆ ಆಹಾರವೇ ವಿಷವಾಗುವ ಸಾಧ್ಯತೆ ಹೆಚ್ಚು. ಹೀಗಾಗಿ ಮಧುಮೇಹಿಗಳು ತಮ್ಮ ಆಹಾರ ಪದ್ಧತಿಯಲ್ಲಿ ಅತ್ಯಂತ ಎಚ್ಚರವಹಿಸಬೇಕು. ಆಹಾರದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಸಕ್ಕರೆ ಅಂಶ ಹೆಚ್ಚಾಗಿ ನಾನಾ ಸಮಸ್ಯೆ ಕಾಡುತ್ತವೆ. ಸಿರಿಧಾನ್ಯಗಳ ಸೇವನೆಯಿಂದ ಟೈಪ್ - 2 ಡಯಾಬಿಟಿಸ್ ನಿಂದ ಬಳಲುತ್ತಿರುವ ಮಧುಮೇಹಿ ರೋಗಿಗಳು ತಮ್ಮ ಮಧುಮೇಹ ಸಮಸ್ಯೆಯನ್ನು ನಿಯಂತ್ರಣದಲ್ಲಿಡಬಹುದು.
ಇನ್ನು ಮಧುಮೇಹ ಇಲ್ಲದವರೂ ಸಹ ತಮ್ಮ ದಿನ ನಿತ್ಯದ ಆಹಾರ ಪದ್ಧತಿಯಲ್ಲಿ ಸಿರಿಧಾನ್ಯಗಳನ್ನು ಬಳಸುವುದರಿಂದ ಭವಿಷ್ಯದಲ್ಲಿ ಮಧುಮೇಹಕ್ಕೆ ಗುರಿಯಾಗುವುದನ್ನು ಈಗಲೇ ತಪ್ಪಿಸಿಕೊಳ್ಳಬಹುದು. ಸಿರಿಧಾನ್ಯದಲ್ಲಿ ಪ್ರೋಟಿನ್, ಕ್ಯಾಲ್ಸಿಯಂ, ಕೊಬ್ಬಿನಾಮ್ಲಗಳು, ಖನಿಜಾಂಶಗಳಾದ ಥಯಾಮಿನ್, ರಿಬೋಫ್ಲಾವಿನ್, ನಿಯಾಸಿನ್, ಪಿರಿಡಾಕ್ಸಿನ್, ವಿಟಮಿನ್ಸ್, ರಂಜಕ, ಮ್ಯಾಗನೀಸ್, ಕಬ್ಬಿಣಾಂಶ, ಪೊಟಾಶಿಯಂ, ಅಮೈನೋ ಆಮ್ಲ ಮುಂತಾದ ಅನೇಕ ಪೋಷಕಾಂಶ ಮತ್ತು ಸೂಕ್ಷ್ಮ ಪೋಷಕಾಂಶಗಳು ಅಡಗಿದ್ದು, ಇವು ದೇಹದ ಆರೋಗ್ಯಕ್ಕೆ ಸಹಕಾರಿಯಾಗಿವೆ.
ಸಿರಿಧಾನ್ಯ ನರಮಂಡಲಕ್ಕೆ ಪ್ರಯೋಜನಕಾರಿಯಾಗಿದ್ದು, ಸಿರಿಧಾನ್ಯಗಳಲ್ಲಿ ಲೆಸಿಧಿನ್ ಅಂಶ ಇರುವುದರಿಂದ ಇದು ರಕ್ತನಾಳಗಳನ್ನು ಶುದ್ಧಿ ಮಾಡುವುದರ ಜೊತೆಗೆ ಬಲಪಡಿಸುವಲ್ಲಿ ಸಹಕಾರಿಯಾಗಿದೆ. ಇದರಲ್ಲಿನ ನಾರಿನಾಂಶ ಮಲಬದ್ಧತೆಗೆ ರಾಮಬಾಣದಂತೆ ಕೆಲಸ ಮಾಡುತ್ತದೆ. ಇದು ರಕ್ತಕ್ಕೆ ಸಕ್ಕರೆ ಪ್ರಮಾಣವನ್ನು ನಿಧಾನವಾಗಿ ನೀಡುತ್ತದೆ. ಇದರಿಂದಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ರಕ್ತದೊತ್ತಡ ಕಡಿಮೆಯಾಗುತ್ತದೆ. ಪಿತ್ತಕಲ್ಲು ಮತ್ತು ಕಿಡ್ನಿಕಲ್ಲುಗಳು ಏರ್ಪಡದಂತೆ ತಡೆಯುತ್ತದೆ ಮತ್ತು ಪಿತ್ತರಸದ ಅತಿಯಾದ ಸ್ರವಿಸುವಿಕೆಯನ್ನು ಕಡಿಮೆ ಮಾಡುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುತ್ತದೆ. ರಕ್ತಹೀನತೆ ಮತ್ತು ಜಠರದ ಹುಣ್ಣು ದೊಡ್ಡ ಕರುಳಿನ ಕ್ಯಾನ್ಸರ್ ನಂತಹ ಅಪಾಯಗಳನ್ನು ತಡೆಗಟ್ಟುತ್ತದೆ. ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಇದು ಸಹಕಾರಿಯಾಗಿದೆ.
ಸಿರಿಧಾನ್ಯಗಳಲ್ಲಿ ಅಡಕವಾಗಿದೆ ಆರೋಗ್ಯಕರ ಅಂಶ
ಮೊದಲೇ ಹೇಳಿದಂತೆ ಸಿರಿಧಾನ್ಯಗಳು ಹಲವಾರು ವೋಷಕಾಂಶಗಳಿಂದ ಸಂಪದ್ಭರಿತವಾಗಿವೆ. ವಿಟಮಿನ್, ಪ್ರೋಟೀನ್, ಕ್ಯಾಲ್ಷಿಯಂ, ಕಬ್ಬಿಣ, ನಾರು ಸೇರಿ ಆರೋಗ್ಯವಂತ ಮನುಷ್ಯನಿಗೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನು ಕೇವಲ ಒಂದೇ ಬಗೆಯ ಸಿರಿಧಾನ್ಯ ಒದಗಿಸಬಲ್ಲದು ಎಂದರೆ ನಿಮಗೆ ಅಚ್ಚರಿಯಾಗಬಹುದು. ರಾಗಿಯಯಲ್ಲಿ 7.70 ಗ್ರಾಂ. ಪ್ರೋಟೀನ್, 67 ಗ್ರಾಂ. ಸಿಎಚ್‌ಒ, 350 ಮಿಲಿ ಗ್ರಾಂ. ಕ್ಯಾಲ್ಷಿಯಂ, 3.9 ಮಿ.ಗ್ರಾಂ. ಕಬ್ಬಿಣ, 3.6 ಗ್ರಾಂ. ನಾರಿನ ಅಂಶವಿರುತ್ತದೆ. ಇನ್ನು ನವಣೆಯಲ್ಲಿ 5 ಗ್ರಾಂ. ಪ್ರೋಟೀನ್, 60.9 ಗ್ರಾಂ. ಸಿಎಚ್‌ಒ, 15 ಮಿಲಿ ಗ್ರಾಂ. ಕ್ಯಾಲ್ಷಿಯಂ, 31 ಮಿ.ಗ್ರಾಂ. ಕಬ್ಬಿಣ, 4.3 ಗ್ರಾಂ. ನಾರಿನ ಅಂಶವಿದೆ. ಸಜ್ಜೆ ಅತ್ಯಂತ ಸಂಪತ್ಭರಿತವಾಗಿದ್ದು, ಇದರಲ್ಲಿ 11.80 ಗ್ರಾಂ. ಪ್ರೋಟೀನ್, 72 ಗ್ರಾಂ. ಸಿಎಚ್‌ಒ, 42 ಮಿಲಿ ಗ್ರಾಂ. ಕ್ಯಾಲ್ಷಿಯಂ, 11 ಮಿ.ಗ್ರಾಂ. ಕಬ್ಬಿಣ, 2.3 ಗ್ರಾಂ. ನಾರಿನ ಅಂಶವಿರುತ್ತದೆ. ಇದರೊಂದಿಗೆ ಅಗತ್ಯ ಪ್ರಮಾಣದ ಕೊಬ್ಬಿನ ಅಂಶ ಕೂಡ ಇವುಗಳಲ್ಲಿದೆ. ಹೀಗಾಗಿ ಸಂಸ್ಕರಿಸಿ ತಯಾರಾದ ಪೌಡರ್ ಸೇವನೆ ಮತ್ತು ಹೈಬ್ರೀಡ್ ಧಾನ್ಯಗಳಿಗಿಂತಲೂ ಸಿರಿಧಾನ್ಯಗಳ ಬಳಕೆ ಸೂಕ್ತ ಎನ್ನುತ್ತಾರೆ ತಜ್ಞರು.
ಇಷ್ಟೆಲ್ಲ ಉಪಯೋಗವಿರುವ ಸಿರಿಧಾನ್ಯಗಳು ಭೂಮಿ ಮೇಲಿನ ಉತ್ತಮ ಆಹಾರವಾಗಿಯೂ ಅಲ್ಲದೆ ಮನುಷ್ಯರ ಪಾಲಿನ ಸಂಜೀವಿನಿಯಾಗಿಯೂ ಆಗಿದೆ ಅಂದ್ರೆ ತಪ್ಪಾಗೋದಿಲ್ಲ.
ಸಿರಿಧಾನ್ಯಗಳಿಗಾಗಿ ಸಂಪರ್ಕಿಸಿ: ಜೀವಿತಾ ಎಂಟರ್ ಪ್ರೈಸಸ್ ಯರಗುಂಟೆ, ಶಿರಾ ತಾಲೂಕು, ತುಮಕೂರು ಜಿಲ್ಲೆ.
ಮೊಬೈಲ್ ನಂಬರ್: 7624931166