ಬೆಂಗಳೂರು: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ನನ್ನ ಹೆಸರಿನ ಬದಲು ಮಹನೀಯರ ಹೆಸರನ್ನು ಇಡುವಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಶಿವಮೊಗ್ಗದಲ್ಲಿ ನೂತನವಾಗಿ ವಿಮಾನ ನಿಲ್ದಾಣವಾಗುತ್ತಿದೆ. ಅದಕ್ಕೆ ನನ್ನ ಹೆಸರು ಇಡುತ್ತೇನೆ ಎಂದು ಹೇಳಿದ್ದೀರಿ. ತಮ್ಮ ಈ ವಿಶೇಷವಾದ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಆದರೆ, ರಾಷ್ಟ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಹಾಗೂ ದೇಶಭಕ್ತರಿದ್ದಾರೆ. ಹೀಗಾಗಿ ಅಂತವರ ಹೆಸರನ್ನಿಡುವುದು ಸೂಕ್ತವಾಗಿದೆ. ಒಂದು ಬಾರಿ ಸಭೆ ಮಾಡಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಿ ಎಂದು ಬಿಎಸ್ವೈ ಪತ್ರದಲ್ಲಿ ತಿಳಿಸಿದ್ದಾರೆ.
ಶಿವಮೊಗ್ಗದ ಸೋಗಾನೆ ಸಮೀಪದಲ್ಲಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಏಪ್ರಿಲ್ 20ರಂದು ವೀಕ್ಷಣೆ ಮಾಡಿದ ಬಳಿಕ ಬಿ.ಎಸ್. ಯಡಿಯೂರಪ್ಪ ಅವರ ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲಾಗುತ್ತದೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಅವರು ಘೋಷಿಸಿದ್ದರು. ಆದರೆ, ಇದೀಗ ಪತ್ರದ ಮೂಲಕ ಬಿಎಸ್ವೈ ನನ್ನ ಹೆಸರನ್ನು ಇಡುವುದು ಬೇಡ ಎನ್ನುವ ಮೂಲಕ ದೊಡ್ಡತನ ಮೆರೆದಿದ್ದಾರೆ.
ಶಿವಮೊಗ್ಗ ವಿಮಾನನಿಲ್ದಾಣ ನಿರ್ಮಾಣ 2006ರಲ್ಲೇ ಆರಂಭಗೊಂಡಿತ್ತು. ಆದರೆ ಕಾಮಗಾರಿ ವಿಳಂಬವಾಯ್ತು. ಬೆಂಗಳೂರಿನ ನಂತರ ಅತಿಹೆಚ್ಚು ಉದ್ದದ ರನ್ ವೇ ಹೊಂದಿರುವ ಏರ್‌ಪೋರ್ಟ್ ಶಿವಮೊಗ್ಗ ವಿಮಾನ ನಿಲ್ದಾಣವಾಗಿದೆ. ಇದು ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣದ ಸೌಲಭ್ಯ ಹೊಂದಿರಲಿದೆ. ಯಡಿಯೂರಪ್ಪ ಅವರು ಇದರ ಕಾಮಗಾರಿ ವೀಕ್ಷಿಸುವಂತೆ ಸೂಚಿಸಿದ್ದರು. ಅದರಂತೆ ಕಾಮಗಾರಿ ವೀಕ್ಷಣೆ ಮಾಡಿದ್ದೇನೆ ಎಂದಿದ್ದರು.