ಬೆಂಗಳೂರು: ಹಾಡುವುದೆಂದರೆ ಈತನಿಗೆ ಪಂಚ ಪ್ರಾಣ. ಶ್ರದ್ಧೆಯಿಂದ ಹಾಡಿದರೂ ಕೂಡ ಈತನ ಉಚ್ಛಾರ ದೋಷ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟ್ರೋಲಿಗೆ ಗುರಿಯಾಗಿದೆ. ರವಿ ಅಣ್ಣಾ ಎಂದೇ ಈತ ಜಾಲತಾಣದಲ್ಲಿ ವ್ಯಂಗ್ಯವಾಗಿ ಟ್ರೋಲ್ ಮಾಡಲಾಗುತ್ತಿದೆ. ಇದರಿಂದ ಮನನೊಂದಿರುವ ರವಿ ತಮ್ಮ ನೋವಿನ ನುಡಿಗಳನ್ನು ಆಡಿದ್ದು, ಅದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ.
ಸಣ್ಣ ವಯಸ್ಸಿನಲ್ಲಿ ನನಗೆ ಕಲಿಯೋದಕ್ಕೆ ಆಗಲಿಲ್ಲ. ಮನೆಯಲ್ಲಿ ಕಷ್ಟ ಇದ್ದಿದ್ದರಿಂದ ನಾನು ಕುಮಟಾದಲ್ಲಿ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದೇನೆ. ಸಂಗೀತ ಅಂದರೆ ನನಗೆ ಪಂಚ ಪ್ರಾಣ. ಹಾಡುವುದು ಅಂದರೆ ತುಂಬಾ ಇಷ್ಟ. ನಾನು ಚಿಕ್ಕವನಿಂದಾಗಿನಿಂದ ಹಾಡುತ್ತಿದ್ದೇನೆ. ನಾನು ಶಾಲೆಗೆ ಹೋಗಿಲ್ಲ. ಹೀಗಾಗಿ ನನ್ನ ಉಚ್ಛಾರ ಸರಿಯಾಗಿ ಬರುವುದಿಲ್ಲ. ಕೆಲವೊಮ್ಮೆ ತಪ್ಪಾಗುತ್ತದೆ, ಅದನ್ನು ಮನಸ್ಸಿಗೆ ಹಾಕಿಕೊಳ್ಳದೇ ಕ್ಷಮಿಸಿ ಎಂದಿದ್ದಾರೆ.
ಮನೆಯಲ್ಲಿ ಎಲ್ಲರೂ ಕೂಲಿ ಮಾಡೇ ಬದುಕು ಸಾಗಿಸುತ್ತಿದ್ದೇವೆ. ನಾನು ಹಾಡುವುದರಲ್ಲಿ ತಪ್ಪಿತ್ತು, ನಾನು ಒಪ್ಪಿಕೊಳ್ಳುತ್ತೇನೆ. ಆದರೆ, ನಾನು ಹಾಡುವುದೇ ಹಾಗೇ. ಅದನ್ನು ತುಂಬಾ ಕೆಟ್ಟದಾಗಿ ಟ್ರೋಲ್ ಮಾಡುತ್ತಿದ್ದಾರೆ. ನಾನು ನನ್ನ ತಪ್ಪನ್ನು ತಿದ್ದುಕೊಳ್ಳುತ್ತೇನೆ. ಅಕ್ಷರ ಕಲಿತುಕೊಂಡೇ ಹಾಡುತ್ತೇನೆ. ದಯವಿಟ್ಟು ನನ್ನ ಕುಟುಂಬಕ್ಕೆ ಯಾರೂ ನೋವು ಕೊಡಬೇಡಿ ಎಂದು ರವಿ ಮನವಿ ಮಾಡಿಕೊಂಡಿದ್ದಾರೆ.
ಕಾಮಿಡಿ ಮಾಡಿ ನನಗೆ ಬೇಜಾರಿಲ್ಲ. ಆದರೆ, ಟ್ರೋಲ್ ಮಾಡಬೇಡಿ ಎಂದು ರವಿ ಕೇಳಿಕೊಂಡಿದ್ದಾರೆ. ರವಿ ಅವರ ತಾಯಿ ಕೂಡ ಕಣ್ಣೀರಿಟ್ಟು ನನ್ನ ಮಗನನ್ನು ಕಿಂಡಲ್ ಮಾತ್ರ ಮಾಡಬೇಡಿ ಎಂದಿದ್ದಾರೆ. ನಾವು ಬಡವರು ಈ ರೀತಿ ಮಾಡಬೇಡಿ. ಟ್ರೋಲ್ನಿಂದ ನಮಗೆ ತುಂಬಾ ನೋವಾಗಿದೆ ಎಂದು ರವಿ ತಾಯಿ ಕಣ್ಣೀರಿಟ್ಟು ಟ್ರೋಲಿಗರನ್ನು ಕೇಳಿಕೊಂಡಿದ್ದಾರೆ.
ರವಿ ಅವರ ಊರಿನವರು ಕೂಡ ಟ್ರೋಲಿಗರನ್ನು ಮನವಿ ಮಾಡಿಕೊಂಡಿದ್ದಾರೆ. ರವಿ ಅವರ ಮನೆಯಲ್ಲಿ ಹೆಣ್ಣು ಮಕ್ಕಳಿದ್ದಾರೆ. ಅವರು ಕಾಲೇಜಿಗೆ ಹೋಗುವಾಗ ಅವರನ್ನು ಆಡಿಕೊಂಡು ನಗುವ ಸನ್ನಿವೇಶ ಸೃಷ್ಟಿಯಾಗಿದೆ. ಅವರ ಮನೆಯ ಪರಿಸ್ಥಿತಿ ತುಂಬಾ ಕಷ್ಟಕರವಾಗಿದೆ. ಅದನ್ನು ಅರಿತುಕೊಂಡು ಟ್ರೋಲ್ ಮಾಡುವುದನ್ನು ನಿಲ್ಲಿಸಿ. ಅವನಿಗೆ ಹಾಡುವುದು ಅಂದರೆ ತುಂಬಾ ಇಷ್ಟ. ಬೇಕಿದ್ದರೆ ಬೆಂಬಲ ನೀಡಿ. ಆದರೆ, ಈ ರೀತಿ ಟ್ರೋಲ್ ಮಾಡಿ ಮನಸ್ಸು ನೋಯಿಸಬೇಡಿ ಎಂದಿದ್ದಾರೆ.
ಅಂದಹಾಗೆ ರವಿ ಅವರು ಉತ್ತರ ಕನ್ನಡ ಮೂಲದವರು. ಅವರಿಗೆ ಹಾಡುವುದೆಂದರೆ ತುಂಬಾ ಇಷ್ಟ. ಆದರೆ, ಹಾಡುವಾಗ ಕೆಲವು ಉಚ್ಛಾರ ದೋಷಗಳಿಂದಾಗಿ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತಿದೆ. ಈ ಕಾರಣದಿಂದ ರವಿ ಅವರು ಟ್ರೋಲ್ ಮಾಡದಂತೆ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದ್ದು, ಇನ್ಮುಂದೆ ರವಿ ಅವರನ್ನು ಟ್ರೋಲ್ ಮಾಡದಂತೆ ಅನೇಕರು ಮನವಿ ಮಾಡಿದ್ದಾರೆ.