ರಾಮನಗರ: ಕರ್ನಾಟಕ ಬಂದ್ನ ಹಿಂದಿನ ಉದ್ದೇಶ ಉಪಯೋಗವಾಗುವಂತಿದ್ದರೇ ಬಂದ್ ಮಾಡಲಿ. ಆದರೆ, ಪ್ರಚಾರಕ್ಕಾಗಿ ಬಂದ್ ಮಾಡಿದ್ರೆ ನಮ್ಮ ಬೆಂಬಲ ಖಂಡಿತ ಇರುವುದಿಲ್ಲ ಎಂದು ನಟ ನಿಖಿಲ್ ಕುಮಾರಸ್ವಾಮಿ ಹೇಳಿದರು.
ರೈಡರ್ ಚಿತ್ರತಂಡ ರಾಮನಗರದ ಶಾನ್ ಚಿತ್ರಮಂದಿರಕ್ಕೆ ಭೇಟಿ ನೀಡಿದ ವೇಳೆ ಬೆಳಗಾವಿಯ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಯನ್ನು ನಿಷೇಧಿಸುವಂತೆ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ್ ಬಂದ್ ಕುರಿತು ನಿಖಿಲ್ ಮಾತನಾಡಿದರು.
ಬಂದ್ ಮಾಡುವುದರಿಂದ ಅನಾನುಕೂಲವಾಗಬಾರದು. ಬಂದ್ ಮಾಡುವ ಮೊದಲು ಜನರಿಗೆ ಎಷ್ಟು ಅನುಕೂಲವಾಗುತ್ತೆ ಅಂತಾ ಯೋಚನೆ ಮಾಡಬೇಕು. ಪ್ರಚಾರ ಮಾಡಲು ಬಂದ್ ಮಾಡಿ ಜನಸಾಮಾನ್ಯರಿಗೆ ತೊಂದರೆ ಕೊಡಬಾರದು. 31 ಕ್ಕೆ ಸಾಕಷ್ಟು ಸಿನಿಮಾಗಳು ಬಿಡುಗಡೆ ಆಗುತ್ತಿದೆ. ಚಿತ್ರರಂಗಕ್ಕೆ ಸಾಕಷ್ಟು ಹೊಡೆತ ಆಗುತ್ತದೆ. ಮೊದಲ ಮೂರು ದಿನವೇ ಪ್ರಮುಖವಾಗಿ ಕಲೆಕ್ಷನ್ ಆಗೋದು ಎಂದರು.
ಬಂದ್ನ ಹಿಂದಿನ ಉದ್ದೇಶ ಉಪಯೋಗವಾಗುವಂತಿದ್ದರೇ ಬಂದ್ ಮಾಡಲಿ. ಪ್ರಚಾರಕ್ಕಾಗಿ ಬಂದ್ ಮಾಡಿದ್ರೆ ನಮ್ಮ ಬೆಂಬಲ ಇರುವುದಿಲ್ಲ. ಕಳೆದ ಎರಡು ವರ್ಷಗಳಿಂದ ಕೊವಿಡ್ ಸಮಸ್ಯೆಗಳನ್ನು ಎದುರಿಸಿದ್ದೇವೆ. ಕೋವಿಡ್ನಿಂದ ಚಿತ್ರಗಳ ಬಿಡುಗಡೆ ಲೇಟ್ ಆಗಿದೆ. ಎರಡನೇ ಅಲೆಯಲ್ಲಿ ಸಾಕಷ್ಟು ಸಾವು ನೋವುಗಳನ್ನು ನೋಡಿದ್ದೇವೆ. ಜನರಿಗಾಗಿ ಸರ್ಕಾರ ಮಾಡುವ ತೀರ್ಮಾನವನ್ನು ಒಪ್ಪಿಕೊಳ್ಳುತ್ತೇವೆ ಎಂದರು.
ರೈಡರ್ ಸಿನಿಮಾ ರಿಲೀಸ್ ಹಿನ್ನೆಲೆಯಲ್ಲಿ ರಾಮನಗರದಲ್ಲಿರುವ ಶಾನ್ ಚಿತ್ರಮಂದಿರಕ್ಕೆ ರೈಡರ್ ಟೀಮ್ ಭೇಟಿ ಕೊಟ್ಟಿದೆ. ನಟ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವರು ಭೇಟಿ ನೀಡಿದ್ದಾರೆ. ರೇಷ್ಮೆ ನಗರಿಯ ಐಜೂರು ವೃತ್ತದಿಂದ ಚಿತ್ರಮಂದಿರದವರೆಗೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು. ಡೊಳ್ಳು ಕುಣಿತೆದೊಂದಿಗೆ ನೆಚ್ಚಿನ ನಟನನ್ನು ಅಭಿಮಾನಿಗಳು ಬರಮಾಡಿಕೊಂಡರು. ಅಭಿಮಾನಿಗಳ ಜತೆ ಚಿತ್ರಮಂದಿರದವರೆಗೂ ಮೆರವಣಿಗೆ ಮೂಲಕ ನಿಖಿಲ್ ತೆರಳಿದರು. ಚಿತ್ರಮಂದಿರದ ಬಳಿ ಬರುತ್ತಿದ್ದಂತೆ ಅಭಿಮಾನಿಗಳು ಹೂ ಮಳೆ ಸುರಿಸಿದರು. ಅಲ್ಲದೆ, ಬೃಹತ್ ಸೇಬಿನ ಹಾರ ಹಾಕಿ ಆಹ್ವಾನ ಮಾಡಿಕೊಂಡರು.
ಚಿತ್ರದ ಬಗ್ಗೆ ಮಾತನಾಡಿದ ನಿಖಿಲ್, ರೈಡರ್ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಕಲೆಕ್ಷನ್ನಲ್ಲಿ ಬೆಳವಣಿಗೆ ಕಾಣುತ್ತಿದೆ. ನಾನು ಮಾಡಿರುವ ಚಿತ್ರಗಳಲ್ಲಿ ಇದು ವಿಷಯ ಇರುವ ಚಿತ್ರ. ಪ್ರೇಕ್ಷಕರು ಕೂಡ ಉತ್ತಮ ರೀತಿಯ ಪ್ರತಿಕ್ರಿಯೆ ಕೊಡುತ್ತಿದ್ದಾರೆಂದು ಹೇಳಿದರು. (ದಿಗ್ವಿಜಯ ನ್ಯೂಸ್)