ಬೆಂಗಳೂರು : ರಾಜರಾಜೇಶ್ವರಿ ನಗರ ಉಪಚುನಾವಣೆ ಮತ ಎಣಿಕೆ ಕಾರ್ಯಕ್ಕೆ ಹಲಗೆವಡೇರಹಳ್ಳಿಯ ಶ್ರೀ ಜ್ಞಾನಾಕ್ಷಿ ವಿದ್ಯಾನಿಕೇತನ ಶಾಲೆಯಲ್ಲಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, 28 ಟೇಬಲ್‌ನಲ್ಲಿ 25 ಸುತ್ತಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಚುನಾವಣಾ ಅಧಿಕಾರಿ ಎನ್.ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಮಸ್ಟರಿಂಗ್ ಕೇಂದ್ರದಲ್ಲಿ ಉಪಚುನಾವಣೆ ಮತ ಎಣಿಕೆ ಕಾರ್ಯದ ಸಿದ್ಧತೆ ಕುರಿತು ಸೋಮವಾರ ನಗರ ಪೊಲೀಸ್ ಆಯುಕ್ತರನ್ನು ಒಳಗೊಂಡ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಆರ್.ಆರ್. ನಗರ ಚುನಾವಣೆಯಲ್ಲಿ 16 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಕ್ಷೇತ್ರದ ಒಟ್ಟು 4,62,236 ಮತದಾರರಲ್ಲಿ 2,09,828(ಶೇ.45.48) ಮತದಾರು ಮತದಾನ ಮಾಡಿದ್ದಾರೆ. ಮತಯಂತ್ರಗಳನ್ನಿಟ್ಟಿರುವ ಭದ್ರತಾ ಕೊಠಡಿಯನ್ನು ಬೆಳಗ್ಗೆ 7.45 ತೆರೆಯಲಾಗುವುದು. ಬೆಳಗ್ಗೆ 8 ಗಂಟೆಗೆ 412 ಅಂಚೆ ಮತಗಳನ್ನು ಎಣಿಕೆ ಮಾಡಿ, ನಂತರ 8.30 ರಿಂದ ಮತಗಟ್ಟೆಗಳ ಮೊದಲ ಸುತ್ತಿನ ಮತಎಣಿಕೆ ಆರಂಭಿಸಲಾಗುವುದು ಎಂದು ಮಾಹಿತಿ ನೀಡಿದರು.
ಮೂರು ವಿಧದ ಮತ ಎಣಿಕೆ ಸಿಬ್ಬಂದಿ: ಕೋವಿಡ್ ಹಿನ್ನೆಲೆಯಲ್ಲಿ ಮತ ಎಣಿಕೆ ಕಾರ್ಯಕ್ಕೆ ಪ್ರತಿ ಕೊಠಡಿಗೆ 7 ಟೇಬಲ್ ಅಳವಡಿಸಲಾಗಿದೆ. ಪ್ರತಿ ಟೇಬಲ್‌ಗೆ 3 ವಿಧದ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಾರೆ. ಪ್ರತಿ ಟೇಬಲ್‌ಗೆ ಒಬ್ಬರಂತೆ ಕೇಂದ್ರ ಸರ್ಕಾರ ನಿಯೋಜಿಸಿರುವ ಸೂಕ್ಷ್ಮ ವೀಕ್ಷಕರು, ಮತ ಎಣಿಕೆ ಮೇಲ್ವಿಚಾರಕರು ಮತ್ತು ಮತ ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 3 ಸಹಾಯಕ ಚುನಾವಣಾ ಅಧಿಕಾರಿಗಳು ಸೇರಿ ಒಟ್ಟು 250 ಮಂದಿ ಮತ ಎಣಿಕೆ ಕಾರ್ಯದಲ್ಲಿ ತೊಡಗಲಿದ್ದಾರೆ. ಅಲ್ಲದೆ ಚುನಾವಣಾ ಆಯೋಗದ ನಿರ್ದೇಶನದಂತೆ ಇವಿಎಂ ಎಣಿಕೆ ಮುಗಿದ ನಂತರ, ಒಟ್ಟು 5 ಮತಗಟ್ಟೆಯ ವಿ.ವಿ.ಪ್ಯಾಟ್‌ಗಳ ಸ್ಲಿಪ್‌ಗಳನ್ನು ಪರಿಶೀಲನೆ ಮಾಡಲಾಗುವುದು.
ಮೊಬೈಲ್, ಬ್ಯಾಗ್ ತರಲು ನಿಷೇಧ: ಮತ ಎಣಿಕೆ ಕೇಂದ್ರಕ್ಕೆ ಚುನಾವಣೆ ಸಿಬ್ಬಂದಿ ಹಾಗೂ ಪಕ್ಷಗಳ ಏಜೆಂಟರನ್ನು ಬೆಳಗ್ಗೆ 7 ಗಂಟೆಗೆ ಬರಲು ಸೂಚಿಸಲಾಗಿದೆ. ಮತ ಎಣಿಕೆ ಸ್ಥಸಳಕ್ಕೆ ಯಾರೊಬ್ಬರೂ ಮೊಬೈಲ್ ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಮತ ಎಣಿಕೆಯಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಹ್ಯಾಂಡ್ ಸ್ಯಾನಿಟೈಸರ್ ಹಾಗೂ ಥರ್ಮಲ್ ಸ್ಕಾೃನಿಂಗ್ ವ್ಯವಸ್ಥೆ ಮಾಡಲಾಗಿದೆ. ಕಡ್ಡಾಯ ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಪಾಲಿಸಬೇಕು. ಪಕ್ಷಗಳ ಏಜೆಂಟರು ಅಶಿಸ್ತು ತೋರಿದರೆ ಮುಲಾಜಿಲ್ಲದೆ ಹೊರಗಡೆ ಕಳುಹಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
4 ಹಂತದ ಭದ್ರತಾ ವ್ಯವಸ್ಥೆ: ನಗರ ಪೊಲಿಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ಚುನಾವಣಾ ಪ್ರಕ್ರಿಯೆ ಶಾಂತಿಯಿಂದ ನಡೆದಿದ್ದು, ಮತ ಎಣಿಕೆ ಕಾರ್ಯವೂ ಸಮಸ್ಯೆಗಳಿಲ್ಲದೆ ನಡೆಯಲು 4 ಹಂತದ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದ ಎರಡೂ ಕಡೆಯ 100 ಮೀ. ಸಾರ್ವಜನಿಕ ಪ್ರವೇಶ ನಿಷೇಧ ಮಾಡಲಾಗಿದೆ. ಚುನಾವಣಾ ಆಯೋಗದಿಂದ ಪಾಸ್ ಪಡೆದವರಿಗೆ ಮಾತ್ರ ಒಳಗೆ ಅವಕಾಶ ನೀಡಲಾಗುತ್ತದೆ. ಮತ ಎಣಿಕೆ ಕೇಂದ್ರಕ್ಕೆ 1 ಡಿಸಿಪಿ, 4 ಎಸಿಪಿ, 20 ಪೊಲೀಸ್ ಇನ್ಸ್‌ಪೆಕ್ಟರ್ 48 ಪಿಎಸ್‌ಐ 76 ಎಎಸ್‌ಐ, 360 ಮುಖ್ಯ ಪೇದೆ, 83 ಮಪ್ತಿ ಸೇರಿ 592 ಸಿಬ್ಬಂದಿ ಹಾಗೂ ಇಡೀ ಕ್ಷೇತ್ರದಲ್ಲಿ ಶಾಂತಿ ಕಾಪಾಡಲು 899 ಮಂದಿ ಸೇರಿ ಒಟ್ಟು ಮತ ಎಣಿಕೆ ದಿನ 1,670 ಸಿಬ್ಬಂದಿಯನ್ನು ಬಂದೋಬಸ್ತ್‌ಗೆ ನಿಯೋಜಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾ ಚುನಾವಣಾ ಅಧಿಕಾರಿ ಹಾಗೂ ಬಿಬಿಎಂಪಿ ವಿಶೇಷ ಆಯುಕ್ತ ಜೆ ಮಂಜುನಾಥ್, ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಚುನಾವಣಾ ಅಧಿಕಾರಿ ನಾಗರಾಜ್ ಉಪಸ್ಥಿತರಿದ್ದರು.
ಬೆಳಗ್ಗೆ 6 ರಿಂದ ನಿಷೇಧಾಜ್ಞೆ ಜಾರಿ:
ಮತ ಎಣಿಕೆ ನಿಮಿತ್ತ ಇಡೀ ಕ್ಷೇತ್ರದಲ್ಲಿ ಬೆಳಗ್ಗೆ 6 ರಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮಧ್ಯ ಮದ್ಯ ಮಾರಾಟ ನಿಷೇಧ ಮತ್ತು 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿಯಾಗಲಿದೆ. ಹೀಗಾಗಿ 4ಕ್ಕಿಂತ ಹೆಚ್ಚು ಜನ ಸೇರುವುದು, ಕಾರ್ಯಕ್ರಮ ಆಯೋಜನೆ ಮಾಡುವಂತಿಲ್ಲ. ಮತ ಎಣಿಕೆ ನಂತರ ಯಾವೊಬ್ಬ ಅಭ್ಯರ್ಥಿ ಅಥವಾ ಕಾರ್ಯಕರ್ತರು ಸಂಭ್ರಮಾಚರಣೆ ಅಥವಾ ಪಟಾಕಿ ಹಚ್ಚುವಂತಿಲ್ಲ. ಒಂದು ವೇಳೆ ನಿಯಮ ಉಲ್ಲಂಸಿದಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಮತ ಎಣಿಕೆ ಕೇಂದ್ರದ ರಸ್ತೆ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದ್ದು, ಪರ್ಯಾಯ ಮಾರ್ಗ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಕಮಲ್‌ಪಂತ್ ಮಾಹಿತಿ ನೀಡಿದರು.