ಜಿಲ್ಲೆ

ಯುಗಾದಿ ಹಿನ್ನೆಲೆ ಅಪ್ಪುಗೆ ಜೀನ್ಸ್ ಪ್ಯಾಂಟ್, ಶರ್ಟ್ ಮತ್ತು ನಾನಾ ಬಗೆಯ ನೈವೇದ್ಯ ಇಟ್ಟ ಅಭಿಮಾನಿ

ವಿಜಯನಗರ: ನಟ ಪುನೀತ್​ ರಾಜ್​ಕುಮಾರ್​ ಸಾವಿನಿಂದ ಅಭಿಮಾನಿಗಳು ಇನ್ನು ಹೊರಬಂದಿಲ್ಲ. ಅಪ್ಪು ನೆನಪಲ್ಲೇ ಇರುವ ಅಭಿಮಾನಿಗಳು ಆಗಾಗ ತಮ್ಮ ಅಭಿಮಾನವನ್ನು ಮೆರೆಯುವ ಮೂಲಕ ಅವರನ್ನು ಸ್ಮರಿಸುತ್ತಲೇ ಇರುತ್ತಾರೆ. ಇದೀಗ ಯುಗಾದಿ ಹಬ್ಬದಲ್ಲೂ ಅಪ್ಪುಗೆ ನೈವೇದ್ಯ ಅರ್ಪಿಸುವ ಮೂಲಕ ಅಭಿಮಾನಿಯೊಬ್ಬ ತನ್ನ ಅಭಿಮಾನ ಮೆರೆದಿದ್ದಾನೆ.

ಯುಗಾದಿ ಹಬ್ಬ ಹಿಂದೂ ಸಂಪ್ರದಾಯದಲ್ಲಿ ನೂತನ ವರ್ಷ. ಹೀಗಾಗಿ ಯುಗಾದಿ ಹಿನ್ನೆಲೆಯಲ್ಲಿ ಹಿರಿಯರಿಗೆ ಬಟ್ಟೆ ಇಟ್ಟು, ಪ್ರಸಾದ ನೈವೇದ್ಯ ಇಡುವ ಪದ್ಧತಿ ಸಾಮಾನ್ಯವಾಗಿದೆ.

ಈ ನಡುವೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಅಪ್ಪು ಅಭಿಮಾನಿ ಉಮೇಶ್, ನಗರದ ಪುನೀತ್ ರಾಜಕುಮಾರ್ ವೃತ್ತದಲ್ಲಿನ ಅಪ್ಪು ಭಾವಚಿತ್ರದ ಮುಂದೆ ಜೀನ್ಸ್ ಪ್ಯಾಂಟ್ ಶರ್ಟ್ ಇಟ್ಟು, ಹೋಳಿಗೆ ಅನ್ನ ಸಾಂಬಾರ್ ಪಲ್ಯದ ಪ್ರಸಾದ ನೈವೇದ್ಯ ಮಾಡಿ ಪೂಜೆ ಸಲ್ಲಿಸಿದ್ದಾನೆ.

ಪುನೀತ್ ರಾಜಕುಮಾರ್ ಸಹ ನಮ್ಮ ಹಿರಿಯರೇ ಆಗಿದ್ದು, ಅದಕ್ಕಾಗಿಯೇ ನಾನಿಂದು ಈ ಪದ್ಧತಿ ಆಚರಣೆ ಮಾಡಿದ್ದೇನೆ ಎನ್ನುತ್ತಾರೆ ಅಭಿಮಾನಿ ಉಮೇಶ್. (ದಿಗ್ವಿಜಯ ನ್ಯೂಸ್​)