ಜಿಲ್ಲೆ

ಮಗನಿಗೆ PSI ಕೆಲ್ಸ ಕೊಡಿಸೋ ಆಸೆಗೆ ಬಿದ್ದು 30 ಲಕ್ಷ ರೂ. ಕಳ್ಕೊಂಡ ಮಂಡ್ಯ ರೈತ: ಬಡ್ಡಿ ಕಟ್ಟಲಾಗದೇ ಕಣ್ಣೀರಿಡ್ತಿದೆ ಕುಟುಂಬ

ಮಂಡ್ಯ: ಮಗನಿಗೆ ಪಿಎಸ್​ಐ ಕೆಲಸ ಕೊಡಿಸುವ ಆಸೆಗೆ ಬಿದ್ದ ರೈತನೊಬ್ಬ ಬರೋಬ್ಬರಿ 30.25 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದೀಗ ರೈತನ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.

ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿ ಗ್ರಾಮದ ನಿವಾಸಿ ನಿಂಗರಾಜು, ಮೋಸ ಹೋದ ರೈತ. ಕೋಲಾರ ಮೂಲದ ಮಂಜುನಾಥ್ ಅಲಿಯಾಸ್​ ಅಕ್ಷಯ್ ಮಂಜುನಾಥ್ ವಿರುದ್ಧ ವಂಚನೆ ಆರೋಪ ಕೇಳಿಬಂದಿದೆ.

ನಿಂಗರಾಜು ಮಗ ಅರುಣ್ ಕುಮಾರ್ PSI ಪರೀಕ್ಷೆ ಬರೆದಿದ್ದ. ಇದರ ನಡುವೆ ನಿಂಗರಾಜುವಿಗೆ ಬಿಜೆಪಿ ಮುಖಂಡರೊಬ್ಬರ ಮೂಲಕ ಅಕ್ಷಯ್​ ಮಂಜುನಾಥ್​ ಪರಿಚಯವಾಗಿದ್ದ. ತಾನು ಸಿಎಂ ಬಸವರಾಜ ಬೊಮ್ಮಾಯಿ, ಬಿ.ವೈ.ವಿಜಯೇಂದ್ರ ಆಪ್ತ ಎಂದು ಹೇಳಿಕೊಂಡಿದ್ದ. 40 ಲಕ್ಷ ರೂಪಾಯಿ ಕೊಟ್ಟರೆ ನಿಮ್ಮ ಮಗನಿಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರ.

ಮಂಜುನಾಥ್​ ಹೇಳಿದ ಮಾತನ್ನು ನಂಬಿ 38 ಲಕ್ಷ ಕೊಡುವುದಾಗಿ ಒಪ್ಪಿ 30.25 ಲಕ್ಷ ರೂಪಾಯಿಯನ್ನು ನಿಂಗರಾಜು ನೀಡಿದ್ದ. 17 ಲಕ್ಷ ಬ್ಯಾಂಕ್ ಮೂಲಕ RTGS ಮಾಡಿದ್ದ. ಉಳಿದ 13.25 ಲಕ್ಷ ರೂಪಾಯಿಯನ್ನು ನಗದು ರೂಪದಲ್ಲಿ ನೀಡಿದ್ದ. ಬಡ್ಡಿಗೆ ಸಾಲ ಮಾಡಿ ಹಾಗೂ ತನ್ನ ಒಂದೂವರೆ ಎಕರೆ ಜಮೀನು ಮಾರಿ ನಿಂಗರಾಜು ಹಣ ನೀಡಿದ್ದ.

ಇದಾದ ಬಳಿಕ PSI ಆಯ್ಕೆ ಪಟ್ಟಿಯಲ್ಲಿ ಮಗನ ಹೆಸರು ಬಾರದಿದ್ದಾಗ ನಿಂಗರಾಜು ಹಣ ವಾಪಾಸ್ ಕೇಳಿದ್ದ. ಆದರೆ, ಹಣ ವಾಪಸ್ ಕೊಡದ ಮಂಜುನಾಥ್​ ಸಬೂಬು ಹೇಳಿಕೊಂಡು ಬರುತ್ತಿದ್ದಾನೆ. ಇತ್ತ ಮಗನಿಗೆ ಕೆಲಸವೂ ಸಿಗದೆ, ಅತ್ತ ಹಣವೂ ಇಲ್ಲದೆ ನಿಂಗರಾಜು ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಬಡ್ಡಿ ಕಟ್ಟಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಕುಟುಂಬಕ್ಕೆ ಬಂದಿದೆ.

ದೂರು ನೀಡಿದ್ರೂ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಕುಟುಂಬ ಕಣ್ಣೀರಿಡುತ್ತಿದೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಹಾಗೂ ಮಂಡ್ಯ ಎಎಸ್ಪಿಗೆ ನಿಂಗರಾಜು ದೂರು ನೀಡಿದ್ದು, FIR ದಾಖಲು ಮಾಡದೇ ಮಂಜುನಾಥ್ ಕರೆಸಿ, ಮಾತನಾಡುವುದಾಗಿ ಪೊಲೀಸರು ಹೇಳುತ್ತಿದ್ದಾರೆ ಎಂದು ನಿಂಗರಾಜು ಅಳಲು ತೋಡಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​​)