ನವದೆಹಲಿ: ಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಪ್ರಲ್ಹಾದ್ ಜೋಶಿ ಅವರಿಗಿಂದು ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜೋಶಿ ಅವರಿಗೆ ಟ್ವೀಟ್ ಮೂಲಕ ಶುಭಕೋರಿದ್ದಾರೆ.
ಶ್ರೀ ಪ್ರಲ್ಹಾದ್ ಜೋಶಿ ಅವರಿಗೆ ಜನ್ಮದಿನದ ಶುಭಾಶಯಗಳು. ಉತ್ತಮ ಸಂಘಟನಾ ಕೌಶಲ್ಯ ಮತ್ತು ಆಡಳಿತಾತ್ಮಕ ಸಾಮರ್ಥ್ಯಗಳಿಂದ ಜೋಶಿ ಅವರು ಆಶೀರ್ವದಿಸಲ್ಪಟ್ಟಿದ್ದಾರೆ. ಅವರು ಕಲ್ಲಿದ್ದಲು ಮತ್ತು ಗಣಿ ವಲಯವನ್ನು ಆಧುನೀಕರಿಸಲು ಮತ್ತು ಸಂಸತ್ತಿನ ಉತ್ಪಾದಕತೆಯನ್ನು ಹೆಚ್ಚಿಸಲು ಗಮನಾರ್ಹ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇನೆಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಪ್ರಧಾನಿ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಜೋಶಿ ಅವರು, ಶುಭಕೋರಿದ್ದಕ್ಕೆ ಧನ್ಯವಾದಗಳು ಪ್ರಧಾನಿ ಮೋದಿಜಿ, ನೀವು ನಮ್ಮೆಲ್ಲರಿಗೂ ಸ್ಫೂರ್ತಿ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಷಾ ಕೂಡ ಟ್ವೀಟ್ ಮೂಲಕ ಶುಭಕೋರಿದ್ದಾರೆ. ನನ್ನ ಅತ್ಯುತ್ತಮ ಸಹೋದ್ಯೋಗಿ ಮತ್ತು ಬಿಜೆಪಿಯ ಹಿರಿಯ ನಾಯಕರಾದ ಪ್ರಲ್ಹಾದ್ ಜೀ ಅವರಿಗೆ ಜನ್ಮದಿನದ ಶುಭಾಶಯಗಳು. ಅವರು ತಮ್ಮ ಅತ್ಯುತ್ತಮ ಸಾಂಸ್ಥಿಕ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ ಮತ್ತು ಅವರ ಸಚಿವಾಲಯವನ್ನು ಅತ್ಯಂತ ಸಮರ್ಪಣೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ದೇವರು ಅವರಿಗೆ ದೀರ್ಘಾಯುಷ್ಯ ಮತ್ತು ಆರೋಗ್ಯಕರ ಜೀವನವನ್ನು ದಯಪಾಲಿಸಲಿ ಎಂದಿದ್ದಾರೆ.
ಅಮಿತ್ ಷಾ ಟವರ ಟ್ವೀಟ್ ಪ್ರತಿಕ್ರಿಯೆ ನೀಡಿರುವ ಜೋಶಿ ಅವರು ಶುಭಕೋರಿದ್ದಕ್ಕೆ ಧನ್ಯವಾದಗಳು ಅಮಿತ್ ಷಾ ಜೀ ನಿಮ್ಮ ನಿರಂತರ ಬೆಂಬಲವನ್ನು ಎದುರು ನೋಡುತ್ತೇನೆ ಎಂದಿದ್ದಾರೆ.
ಹೀಗೆ ಸಾಕಷ್ಟು ರಾಜಕೀಯ ಗಣ್ಯರು ಪಲ್ಹಾದ್ ಜೋಶಿ ಅವರಿಗೆ ಶುಭಹಾರೈಸುತ್ತಿದ್ದಾರೆ. ಬರ್ತಡೇ ಹಿನ್ನೆಲೆ ನ. 25ರಂದೇ ಟ್ವೀಟ್ ಮಾಡಿದ್ದ ಜೋಶಿ ಅವರು ವಿಶೇಷ ಚಳಿಗಾಲ ಅಧಿವೇಶನ 29ರಿಂದ ಪ್ರಾರಂಭವಾಗಲಿದ್ದು, ಅದರ ಸಿದ್ಧತೆಯಲ್ಲಿ ತೊಡಗಿಕೊಳ್ಳಬೇಕಿರುವುದರಿಂದ ನಾನು ದೆಹಲಿಯಲ್ಲಿದ್ದೇನೆ. ಹೀಗಾಗಿ ಹುಟ್ಟುಹಬ್ಬದ ದಿನ ನಾನು ಹುಬ್ಬಳ್ಳಿಯಲ್ಲಿ ಇರುವುದಿಲ್ಲ. ಜನ್ಮದಿನದಂದು ಯಾವುದೇ ಬ್ಯಾನರ್, ಹೋರ್ಡಿಂಗ್ಸ್, ಕಟೌಟ್ ಮುಂತಾದವುಗಳಿಗೆ ಅನವಶ್ಯಕ ವೆಚ್ಚಮಾಡಬಾರದೆಂದು ಕೇಳಿಕೊಳ್ಳುತ್ತೇನೆಂದು ಅಭಿಮಾನಿಗಳಲ್ಲಿ ಮನವಿ ಮಾಡಿದ್ದರು.