ಜಿಲ್ಲೆ

ಶಿವಾಜಿ ನಗರ ಪೊಲೀಸ್ ಸಿಬ್ಬಂದಿ ದುರಂತ ಸಾವು: ಅಪಘಾತದ ಭೀಕರತೆ ಬಿಚ್ಚಿಟ್ಟ ಆಂಧ್ರದ ಪೊಲೀಸ್​ ಅಧಿಕಾರಿ

ಬೆಂಗಳೂರು: ಇಂದು (ಜುಲೈ 24) ಬೆಳಗ್ಗೆ ಆಂಧ್ರ ಪ್ರದೇಶದ ಚಿತ್ತೂರಿನ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಶಿವಾಜಿ ನಗರ ಪೊಲೀಸ್​ ಠಾಣೆಯ ಇಬ್ಬರು ಸಿಬ್ಬಂದಿ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಗಾಂಜಾ ಗ್ಯಾಂಗ್​ ಹಿಡಿಯಲು ಹೋಗಿದ್ದ ವೇಳೆ ದುರ್ಘಟನೆ ಸಂಭವಿಸಿದ್ದು, ಅಪಘಾತ ಹೇಗೆ ಸಂಭವಿಸಿದೆ ಎಂಬುದನ್ನು ಆಂಧ್ರದ ಪೊಲೀಸ್​ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಚಿತ್ತೂರು ಜಿಲ್ಲೆಯ ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ಬಳಿ ಇರುವ ಕೇಳ ಸೇತುವೆಯಲ್ಲಿ ಮುಂಜಾನೆ ಸುಮಾರು 4.55ರ ಸುಮಾರಿಗೆ ಅಪಘಾತ ನಡೆದಿದೆ. ಈ ಅಪಘಾತದಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದ ಓರ್ವ ಎಸ್​ಐ ಮತ್ತು ಕಾನ್ಸ್​ಟೇಬಲ್ ಹಾಗೂ ಓರ್ವ ಚಾಲಕ​ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ವಾಹನವು ಚಿತ್ತೂರಿನಿಂದ ತಿರುಪತಿಗೆ ತೆರಳುತ್ತಿತ್ತು. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗಿದೆ. ಸೇತುವೆ ಬಳಿಯಿದ್ದ ಗೋಡೆಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಪಲ್ಟಿಯಾಗಿ ಪಕ್ಕದ ರಸ್ತೆಯ ಮೇಲೆ ಹಾರಿ ಬಿದ್ದಿದೆ. ಪರಿಣಾಮ ಮೂವರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಮುಂಜಾನೆ ಆಗಿದ್ದರಿಂದ ಚಾಲಕ ನಿದ್ರೆಯ ಮಂಪರಿನಲ್ಲಿದ್ದಿದ್ದೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಮೃತರು ಬೆಂಗಳೂರಿನ ಶಿವಾಜಿ ನಗರದ ಪೊಲೀಸ್​ ಠಾಣೆಯ ಸಿಬ್ಬಂದಿ. ಸಬ್​ ಇನ್ಸ್‌ಪೆಕ್ಟರ್ ಅವಿನಾಶ್, ಕಾನ್ಸ್​ಟೇಬಲ್​ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್ಐ ದೀಕ್ಷಿತ್​, ಕಾನ್ಸ್​ಟೇಬಲ್​ ಶರಣಬಸವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಬ್​ ಇನ್ಸ್‌ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್ಐ ದೀಕ್ಷಿತ್, ಪೊಲೀಸ್​ ಕಾನ್ಸ್​ಟೇಬಲ್​ ಅನಿಲ್ ಸೇರಿ ಆರು ಜನರ ತಂಡವು ಖಾಸಗಿ ಟ್ರಾವೆಲ್ಸ್​ನಿಂದ ಇನ್ನೋವಾ ಕಾರನ್ನು ಬಾಡಿಗೆ ಪಡೆದು ಗಾಂಜಾ ಗ್ಯಾಂಗ್​ ಹಿಡಿಯಲು ಆಂಧ್ರಕ್ಕೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ಬಗ್ಗೆ ಮಾಹಿತಿ ಪಡೆದಿರುವ ಶಿವಾಜಿನಗರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಪುಲಿಕೇಶಿನಗರದ ಎಸಿಪಿ ಅಬ್ದುಲ್ ಕೂಡ ಘಟನಾ ಸ್ಥಳಕ್ಕೆ ತೆರಳಿದ್ದಾರೆ.

ಇತ್ತ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಮೌನ ಮಡುಗಟ್ಟಿದೆ. ತಮ್ಮ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ಶಿವಾಜಿನಗರ ಠಾಣೆ ಬಳಿ ನೀರವ ಮೌನ ಆವರಿಸಿದೆ. ಸಹೋದ್ಯೋಗಿಗಳನ್ನು ನೆನೆದು ಪೊಲೀಸ್​ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ. (ದಿಗ್ವಿಜಯ ನ್ಯೂಸ್​)