ಜಿಲ್ಲೆ

ಕಲಾಪದಲ್ಲಿ MLC ತೇಜಸ್ವಿನಿ ಗೌಡ ಮಾಡಿದ ಗಂಭೀರ ಆರೋಪಕ್ಕೆ ಮಂಗ್ಳೂರು ಪೊಲೀಸ್​ ಆಯುಕ್ತರ ತಿರುಗೇಟು..!

ಮಂಗಳೂರು: ವಿಧಾನ ಪರಿಷತ್ ಕಲಾಪದಲ್ಲಿ ಎಂಎಲ್​ಸಿ ತೇಜಸ್ವಿನಿ ಗೌಡ ಮಾಡಿದ ಗಂಭೀರ ಆರೋಪಕ್ಕೆ ಮಂಗಳೂರು ಪೊಲೀಸ್​ ಆಯುಕ್ತರು ತಿರುಗೇಟು ನೀಡಿದ್ದಾರೆ.

ಮೈಸೂರಿ‌ನಲ್ಲಿ ಅನ್ಯಕೋಮಿನ ಮಂಗಳೂರು ಯುವಕನಿಂದ ಲವ್, ಸೆಕ್ಸ್ ದೋಖಾ ಆಗಿದೆ. ಯುವಕನಿಂದ ಮೋಸ ಹೋದ ಸಂತ್ರಸ್ತ ಯುವತಿಯ ದೂರನ್ನು ಮಂಗಳೂರು ಪೊಲೀಸರು ಸ್ವೀಕರಿಸಿಲ್ಲ ಅಂತಾ ತೇಜಸ್ವಿನಿ ಗೌಡ ಅವರು ಕಲಾಪದಲ್ಲಿ ಆರೋಪ ಮಾಡಿದ್ದರು.

ಮೋಸ ಮಾಡಿದ್ದನ್ನು ಪ್ರಶ್ನಿಸಲು ಯುವತಿ ಸೆ. 21ರಂದು ಮಂಗಳೂರಿನ ಕೋಣಾಜೆಗೆ ಬಂದಿದ್ದಳು. ಆದರೆ, ಈ ವೇಳೆ ಪೊಲೀಸರು ಆಕೆಯ ದೂರು ಪಡೆದಿಲ್ಲ. ದೂರು ನೀಡೋಕೆ ಬಂದಾಕೆಯನ್ನು ಬಸ್ ಹತ್ತಿಸಿ ವಾಪಾಸ್ ಮೈಸೂರಿಗೆ ಕಳುಹಿಸಿದ್ದಾರೆ ಎಂದು ತೇಜಸ್ವಿನಿ ಆರೋಪ ಮಾಡಿದ್ದರು.

ಆರೋಪಕ್ಕೆ ಪ್ರತ್ಯುತ್ತರ ನೀಡಿರುವ ಮಂಗಳೂರು ಪೊಲೀಸ್ ಆಯುಕ್ತ ಎನ್‌.ಶಶಿಕುಮಾರ್, ಈ ಪ್ರಕರಣದಲ್ಲಿ ಪೊಲೀಸರಿಂದ ಯಾವುದೇ ಲೋಪ ಆಗಿಲ್ಲ. ಮೈಸೂರಿನ ಯುವತಿ ತನಗೆ ಮೋಸ ಆಗಿದೆ ಅಂತಾ ಮಂಗಳೂರಿನ ಯುವಕನ ಮನೆಗೆ ಬಂದಿದ್ದಾಳು. ಈ ವೇಳೆ ಯುವಕನ ಮನೆಯಲ್ಲಿ ಯುವತಿಗೆ ಕಪಾಳಮೋಕ್ಷ ಮಾಡಿ ಮನೆಯಿಂದ ಹೊರ ಕಳುಹಿಸಿದರು. ಬಳಿಕ ಯುವತಿ ಕೋಣಾಜೆ ಬಸ್ ನಿಲ್ದಾಣಕ್ಕೆ ಬಂದು ಅಳುತ್ತಾ ಕುಳಿತಿದ್ದಳು. ಆಗ ಸಾರ್ವಜನಿಕರು 112ಗೆ ಕರೆ ಮಾಡಿದರು ಎಂದರು.

ಇದಾದ ಬಳಿಕ ನಮ್ಮ ಪೊಲೀಸರೇ ಬಸ್ ನಿಲ್ದಾಣಕ್ಕೆಹೋಗಿ ಮಹಿಳೆಯ ಕಷ್ಟ ಕೇಳಿದ್ದಾರೆ. ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ದೂರನ್ನು ಇಲ್ಲಿ ಕೂಡ ಕೊಡಬಹುದು ಅಂತಾ ಹೇಳಿದ್ದಾರೆ.‌ ಆದ್ರೆ ಮೈಸೂರಿನಲ್ಲೇ ಮೋಸ ಆಗಿರೋದು ಅಲ್ಲೇ ದೂರು ಕೊಡುತ್ತೇನೆ ಎಂದು ಯುವತಿ ಹೇಳಿದ್ದಾರೆ. ಬಳಿಕ ಪೊಲೀಸ್ ಇಲಾಖೆ ವಾಹನದಲ್ಲಿ ಕರೆದುಕೊಂಡು ಹೋಗಿ ಆಕೆಯನ್ನು ಬಸ್ ಹತ್ತಿಸಿದ್ದಾರೆ. ಬಸ್ ಚಾಲಕ ಮತ್ತು ನಿರ್ವಾಹಕರಿಗೂ ಜೋಪಾನವಾಗಿ ಕರೆದುಕೊಂಡು ಹೋಗಲು ಹೇಳಿದ್ದಾರೆ.‌ ಆದ್ರೆ ಬಸ್​ನಲ್ಲಿರುವಾಗ ಅವರ ಅಡ್ವೋಕೇಟ್ ಇಲ್ಲೇ ದೂರು ನೀಡಲು ಹೇಳಿದ್ದಾರೆ.‌ ಬಳಿಕ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ‌. ನಾವು ಆ ದಿನವೇ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಪೊಲೀಸ್​ ಆಯುಕ್ತ ಶಶಿ ಕುಮಾರ್​ ಸ್ಪಷ್ಟನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)