ಜಿಲ್ಲೆ

ಮಂಡ್ಯ ಎಸ್​ಪಿ ಸರ್ವಾಧಿಕಾರಿ ಧೋರಣೆಗೆ ಜನರ ಆಕ್ರೋಶ: ತರಬೇತಿನಿರತ ಪೇದೆಗಳು ಇವರ ಜೀತದಾಳುಗಳಾ?

ಮಂಡ್ಯ: ಕಾನೂನು ಪಾಲಿಸುವವರಿಂದಲೇ ಕಾನೂನು ಉಲ್ಲಂಘನೆಯಾಗಿರುವ ಪ್ರಸಂಗ ಮಂಡ್ಯದಲ್ಲಿ ನಡೆದಿದೆ. ಯಾರ ಅನುಮತಿಯನ್ನು ಪಡೆಯದೆ ಸರ್ಕಾರಿ ನಿವಾಸದಲ್ಲಿದ್ದ 10ಕ್ಕೂ ಹೆಚ್ಚು ಮರಗಳನ್ನು ಕಡಿಸಿ ಮಂಡ್ಯ ಪೊಲೀಸ್​ ವರಿಷ್ಠಾಧಿಕಾರಿ ಡಾ.ಅಶ್ವಿನಿ ಅವರು ಸರ್ವಾಧಿಕಾರಿ ಧೋರಣೆ ತೋರಿದ್ದಾರೆ.

ಅರಣ್ಯ ಇಲಾಖೆ ಅನುಮತಿ ಪಡೆಯದೇ ಮರಗಳನ್ನು ಕತ್ತರಿಸಿದ್ದಾರೆ. ಅಲ್ಲದೆ, ತಮ್ಮ ಸೇವೆಗೆ ತರಬೇತಿನಿರತ ಪೇದೆಗಳನ್ನು ಜೀತದಾಳುಗಳಂತೆ ನಡೆಸಿಕೊಂಡಿದ್ದಾರೆ. ಮರ ಕಡಿದು, ಸಾಗಿಸಲು ಪೊಲೀಸ್ ವಾಹನ ಹಾಗೂ ತರಬೇತಿ ನಿರತ ಪೊಲೀಸರನ್ನು ಬಳಕೆ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ.

ಎಸ್ಪಿ ಅಶ್ವಿನಿಯ ಈ ವರ್ತನೆ ಇದೇ ಮೊದಲೇನಲ್ಲ. ತಿಂಗಳ ಹಿಂದೆಯೂ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿರುವ ಆರೋಪವಿದೆ. ಪೊಲೀಸ್ ಮೈದಾನದಲ್ಲಿದ್ದ 50ಕ್ಕೂ ಹೆಚ್ಚು ಮರ ಕಡಿದು ಸಾಗಣೆ ಮಾಡಿದ್ದಾರೆನ್ನಲಾಗಿದೆ. ಕೋವಿಡ್ ಸಮಯದಲ್ಲಿ ಮನೆ, ಕಚೇರಿ ನವೀಕರಣ ಮಾಡಿಸಿರುವ ಆರೋಪವು ಇದೆ.

ಇನ್ನು ವಾಸ್ತುಗಾಗಿ ಸರ್ಕಾರಿ ವಸತಿ ಗೃಹದ ಗಾರ್ಡ್ ಕೊಠಡಿ ಧ್ವಂಸ, ಗೇಟ್ ಬದಲಾವಣೆ. ಆಧುನಿಕವಾಗಿ ಕಚೇರಿ, ಮನೆ ನವೀಕರಣ ಸೇರಿ ಹಲವು ನಿಯಮಗಳನ್ನು ಉಲ್ಲಂಘಿಸಿರುವ ಎಸ್ಪಿ ಸರ್ವಾಧಿಕಾರಿಯಾಗಿ ವರ್ತಿಸಿದ್ದಾರೆ. ಕೊವಿಡ್ ಸಂಕಷ್ಟದಲ್ಲಿ ಸರ್ಕಾರಕ್ಕೆ ಆರ್ಥಿಕ ಹೊರೆಯಾಗಿರುವುದಲ್ಲದೆ, ಕೋವಿಡ್ ಸಂದರ್ಭದಲ್ಲಿ ಇದೆಲ್ಲಾ ಬೇಕಿತ್ತಾ ಎಂದು ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ. ಎಸ್ಪಿಗೊಂದು ಕಾನೂನು, ಸಾಮಾನ್ಯರಿಗೊಂದು ಕಾನೂನಿದೆಯ? ಕಾನೂನು ಉಲ್ಲಂಘಿಸಿದ ಎಸ್ಪಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. (ದಿಗ್ವಿಜಯ ನ್ಯೂಸ್​)