ಜಿಲ್ಲೆ

KRS​ ಡ್ಯಾಂನಿಂದ ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ: ನದಿ ತೀರದ 1 ಕಿ.ಮೀ.ವರೆಗೆ ಸಾರ್ವಜನಿಕರಿಗೆ ನಿರ್ಬಂಧ

ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ (ಕೆಆರ್​ಎಸ್​) ಅಣೆಕಟ್ಟೆಗೆ ಹರಿದುಬರುತ್ತಿರುವ ನೀರಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದೆ. ಕೆಆರ್​ಎಸ್​ ಡ್ಯಾಂ ಭರ್ತಿಯಾಗಿರುವುದರಿಂದ ಕಾವೇರಿ ನದಿಗೆ ನೀರು ಬಿಡಲಾಗಿದೆ.

ಒಳ ಹರಿವು ಹೆಚ್ಚಾದಂತೆ ಹೊರ ಹರಿವಿನ ಪ್ರಮಾಣ ಕೂಡ ಏರಿಕೆಯಾಗಿದ್ದು, ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಆವರಿಸಿದೆ. ಒಂದು ತಿಂಗಳ ಅಂತರದಲ್ಲಿ ಎರಡನೇ ಬಾರಿಗೆ ನೆರೆ ಆತಂಕ ಆವರಿಸಿದೆ. ಸದ್ಯ ಅಣೆಕಟ್ಟೆಗೆ 67,712 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಅಣೆಕಟ್ಟೆಯಿಂದ ನದಿಗೆ 81,112 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.

ಭಾರಿ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವುದರಿಂದ ನದಿ ಹಂಚಿನ ದೇಗುಲ, ಪ್ರವಾಸಿ ತಾಣಗಳು ಜಲಾವೃತವಾಗಿವೆ. ಪ್ರವಾಹ ಭೀತಿ ಎದುರಾಗುತ್ತಿದ್ದಂತೆ ಶ್ರೀರಂಗಪಟ್ಟಣ ತಾಲೂಕು ಆಡಳಿತ ಅಲರ್ಟ್ ಆಗಿದೆ. ನದಿ ತೀರದ 1 ಕಿಲೋಮೀಟರ್ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ವಿಧಿಸಿ ಶ್ರೀರಂಗಪಟ್ಟಣ ತಹಶೀಲ್ದಾರ್ ಶ್ವೇತ ರವೀಂದ್ರ ಆದೇಶ ಹೊರಡಿಸಿದ್ದಾರೆ.

ಕಾವೇರಿ ನದಿ ದಡದಲ್ಲಿರುವ ದೇವಸ್ಥಾನಗಳಿಗೆ ಜಲ ದಿಗ್ಬಂಧನ ಹಾಕಿದೆ. ಶ್ರೀರಂಗಪಟ್ಟಣದ ಗಣಪತಿ, ಚಂದ್ರಮೌಳೇಶ್ವರ ಮತ್ತು ಅಷ್ಟಮಾತೆಯರ ದೇವಸ್ಥಾನಗಳು ಜಲಾವೃತವಾಗಿವೆ. ದೈನಂದಿನ ಪೂಜಾ ಕೈಂಕರ್ಯಗಳು ಸಹ ಬಂದ್ ಆಗಿವೆ. ನದಿ ಬಳಿಗೆ ಬರದಂತೆ ಜನರಿಗೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್​)