ಬೆಂಗಳೂರು: ಜಮೀನು ತಕರಾರು ವಿಚಾರಕ್ಕೆ ಸಂಬಂಧಿಸಿದಂತೆ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಇನ್ಸ್ಪೆಕ್ಟರ್ ಒಬ್ಬರು ಲಂಚ ಸ್ವೀಕರಿಸುವ ವೇಳೆ ರೆಡ್ಹ್ಯಾಂಡ್ ಆಗಿ ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.
ಚಿಕ್ಕಜಾಲ ಇನ್ಸ್ಪೆಕ್ಟರ್ ರಾಘವೇಂದ್ರ 10 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಎರಡು ಕಂತಿನಲ್ಲಿ ನಾಲ್ಕು, ನಾಲ್ಕು ಲಕ್ಷ ರೂಪಾಯಿ ಹಣವನ್ನು ಜಮೀನುದಾರ ನೀಡಿದ್ದ. ಇನ್ನುಳಿದ 2 ಲಕ್ಷ ರೂ. ಕೊಡುವ ಸಂದರ್ಭದಲ್ಲಿ ಇನ್ಸ್ಪೆಕ್ಟರ್ ರಾಘವೇಂದ್ರ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.
ಈ ಹಿಂದೆ ಇದೇ ಠಾಣೆಯ ಇನ್ಸ್ಪೆಕ್ಟರ್ ಯಶವಂತ್ ಕೂಡ ಎಸಿಬಿ ಬಲೆಗೆ ಬಿದ್ದಿದ್ದರು. ಅವರಿಂದ ತೆರವಾಗಿದ್ದ ಜಾಗಕ್ಕೆ, ರಾಘವೇಂದ್ರರನ್ನು ಠಾಣಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. ಈಗ ಅದೇ ಠಾಣೆಯ ಮತ್ತೊಬ್ಬ ಇನ್ಸ್ಪೆಕ್ಟರ್ ಮತ್ತೆ ಲಂಚ ಕೇಳಿ ಸಿಕ್ಕಿಬಿದ್ದಿದ್ದಾರೆ. ಸದ್ಯ ರಾಘವೇಂದ್ರರನ್ನು ವಶಕ್ಕೆ ಪಡೆಸಿರುವ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. (ದಿಗ್ವಿಜಯ ನ್ಯೂಸ್)