ಜಿಲ್ಲೆ

ಹಿಂದು ಯುವಕ-ಮುಸ್ಲಿಂ ಯುವತಿಯ ಲವ್ ಸ್ಟೋರಿ: ಮದುವೆಯಾದ ಬಳಿಕ ನಡೀತು ಭಾರೀ ಹೈಡ್ರಾಮಾ!

ಕೊಪ್ಪಳ: ಒಂದು ವರ್ಷದಿಂದ ಪ್ರೀತಿಸುತ್ತಿದ್ದ ಅಂತರ್ಧಮೀಯ ಜೋಡಿ, 5 ದಿನದ ಹಿಂದೆ ಮನೆ ಬಿಟ್ಟು ಹೋಗಿ ಮದುವೆ ಆಗಿದೆ. ಇದೀಗ ನವ ದಂಪತಿ ರಕ್ಷಣೆ ಕೋರಿ ಪೊಲೀಸ್ ಠಾಣೆಗೆ ಬಂದಿದ್ದು, ಎರಡೂ ಗುಂಪಿನ ಮುಖಂಡರು ಠಾಣೆಗೆ ದೌಡಾಯಿಸಿದ್ದಾರೆ. ನಿನ್ನೆ ಸಂಜೆಯಿಂದಲೂ ಹೈಡ್ರಾಮ ಶುರುವಾಗಿದ್ದು, ಮದುವೆ ಪ್ರಹಸನ ಇಂದು ಮುಂದುವರಿಯಿತು.

ಕನಕಗಿರಿ ಪಟ್ಟಣದ 21 ವರ್ಷದ ದಿಲ್ ಶಾದ್ ಬೆಗಂ‌ ಮತ್ತು 22 ವರ್ಷದ ಕನಕರೆಡ್ಡಿ ಪ್ರೇಮ ವಿವಾಹ ಪ್ರಕರಣ ನಿನ್ನೆಯಿಂದ ದಿನಕ್ಕೊಂದು ಹೈಡ್ರಾಮಾ ಸೃಷ್ಠಿ ಮಾಡಿತು. ಪ್ರೀತಿಸಿ ಮದುವೆ ಆಗಿರುವ ಈ ಜೋಡಿ, ರಕ್ಷಣೆ ಕೋರಿ ನಿನ್ನೆ ಕನಕಗಿರಿ ಪೊಲೀಸ್ ಠಾಣೆಗೆ ಬಂದಿತು. ವಿಷಯ‌ ತಿಳಿದು ಕೂಡಲೇ ಒಂದೆಡೆ ಯುವತಿ ಮನೆಯವರು, ಮತ್ತೊಂದೆಡೆ ಯುವಕನ ಕುಟುಂಬ ಠಾಣೆಗೆ ದೌಡಾಯಿಸಿತು.

ನಿನ್ನೆ ರಾತ್ರಿಯಿಡೀ ಯುವತಿ ತಂದೆ-ತಾಯಿ ಆಕೆಯ ಮನವೊಲಿಕೆಗೆ ಯತ್ನಿಸಿ, ವಿಫಲರಾಗಿದ್ದಾರೆ. ಇತ್ತ ಪೊಲೀಸರು ನವ ಜೋಡಿಯನ್ನು ಮನೆಗೆ ಕಳುಹಿಸುವ ಬದಲಿಗೆ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲು ಮುಂದಾದರು. ಮಧ್ಯಪ್ರವೇಶಿಸಿದ ಯುವಕನ ಕಡೆಯ ಹುಡುಗರು ಇಬ್ಬರೂ ವಯಸ್ಕರಾಗಿದ್ದು, ಸಾಂತ್ವನ ಕೇಂದ್ರಕ್ಕೆ ಕಳುಹಿಸಬೇಡಿ ಎಂದು ಅಡ್ಡಿ ಮಾಡಿದರು.‌ ಕೊನೆಗೆ ಸಾಂತ್ವನ ಕೇಂದ್ರದ ಮುಂದೆಯೇ ಯುವಕನ ಕಡೆಯವರು ಅಡುಗೆ ಮಾಡಿಕೊಂಡು, ಊಟ ಮಾಡಿ ಜಾಗರಣೆ ಮಾಡಿದರು.

ಪ್ರೇಮ ವಿವಾಹ ಪ್ರಕರಣ ‌ಇಂದು ಬೆಳಗ್ಗೆಯೂ ಮುಂದುವರಿಯಿತು. ಇಂದು ಕೂಡ ಯುವತಿಯ ಕುಟುಂಬದವರು ಸಾಕಷ್ಟು ಬಾರಿ ಆಕೆಯನ್ನು ಮನವೊಲಿಸಿ, ಮನೆಗೆ ಕರೆದೊಯ್ಯುಲು ಪ್ರಯತ್ನಿಸಿದರು.‌ ಯುವತಿಯ ಮನವೊಲಿಸಲು ಆಕೆಯ ಕುಟುಂಬಕ್ಕೆ ಪೊಲೀಸರು ಪದೇ ಪದೇ ಅವಕಾಶ ನೀಡಿದ್ದರಿಂದ ಯುವಕನ ಕಡೆಯ ಗುಂಪು ಆಕ್ಷೇಪ ವ್ಯಕ್ತಪಡಿಸಿತು. ಇದರಿಂದ ಪೊಲೀಸರು ಸದ್ದಿಲ್ಲದೇ ಯುವತಿ ಕುಟುಂಬದ ಜತೆಗೆ ನವಜೋಡಿಯನ್ನು ಕನಕಗಿರಿ ಪೊಲೀಸ್ ಠಾಣೆಯಿಂದ ತಾವರಗೇರ ಪೊಲೀಸ್ ಠಾಣೆಗೆ ಸ್ಥಳಾಂತರಿಸಲು ಮುಂದಾದರು. ಆಗಲೂ ಯುವಕನ ಕಡೆಯ ಹುಡುಗರು ಪೊಲೀಸ್ ವಾಹನ ಹಿಂಬಾಲಿಸಿದರು. ನಡು ರಸ್ತೆಯಲ್ಲೇ ವಾಹನ ನಿಲ್ಲಿಸಿ, ನಮಗೂ ಅವರ ಜತೆಗೆ ಬರಲು ಅವಕಾಶ ನೀಡಬೇಕೆಂದು ಕೇಳಿಕೊಂಡರು. ಪೊಲೀಸ್ ವಾಹನ ಹಿಂಬಾಲಿಸುತ್ತಿದ್ದ ಗುಂಪಿನ ಮನವೊಲಿಸಿದ ಪೊಲೀಸರು, ತಾವರಗೇರ ಠಾಣೆಗೆ ಕರೆತಂದರು. ಯುವತಿ ಕುಟುಂಬದ ಕೊನೆ ಪ್ರಯತ್ನ ‌ವಿಫಲವಾಗಿದ್ದರಿಂದ ಕಣ್ಣಿರಿಟ್ಟು ವಾಪಾಸ್ ಹೋದರು.

ನಿನ್ನೆ ಸಂಜೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ಶುರುವಾದ ಲವ್ ಮ್ಯಾರೇಜ್ ಪ್ರಹಸನ ಇಂದು ತಾವರಗೇರ ಪೊಲೀಸ್ ಠಾಣೆಯಲ್ಲಿ ಸುಖಾಂತ್ಯ ಕಂಡಿತು. (ದಿಗ್ವಿಜಯ ನ್ಯೂಸ್​)