ಬೆಂಗಳೂರು: ಕಳೆದ ಸೋಮವಾರ ತಡರಾತ್ರಿ ಕೋರಮಂಗಲ ಮಂಗಳ ಕಲ್ಯಾಣ ಮಂಟಪದ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ತಮಿಳುನಾಡು ಶಾಸಕ ವೈ. ಪ್ರಕಾಶ್ ಪುತ್ರ ಕರುಣಾಸಾಗರ್ ಸೇರಿದಂತೆ ಏಳು ಮಂದಿ ದಾರುಣವಾಗಿ ಸಾವಿಗೀಡಾದರು. ಇದರಲ್ಲಿ ಕೇರಳ ಮೂಲದ ದಂತ ವೈದ್ಯೆಯು ಕೂಡ ಒಬ್ಬರು.
ಮೃತ ಮಲಯಾಳಿ ಯುವತಿಯ ಹೆಸರು ಡಾ. ಧನುಷಾ ಪಡಿಕ್ಕಲ್ (26). ಈಕೆ ಮುರುಳಿದಾಸ್ ಪಡಿಕ್ಕಲ್ ಎಂಬುವರ ಮಗಳು. ಕೇರಳದ ಕುಟ್ಟಿಪ್ಪುರಮ್ನ ತವನೂರ್ ಮೂಲದ ನಿವಾಸಿ. ಧನುಷಾ ಬೆಂಗಳೂರಿನಲ್ಲಿ ದಂತ ವೈದ್ಯೆಯಾಗಿ ಕೆಲಸ ಮಾಡುತ್ತಿದ್ದರು. ಧನುಷಾ ಮತ್ತು ಮೃತ ಬಿಂದು ಇಬ್ಬರು ಬೆಂಗಳೂರು ಡೆಂಟಲ್ ಕಾಲೇಜಿನಲ್ಲಿ ಕ್ಲಾಸ್ಮೇಟ್ಸ್ ಆಗಿದ್ದರು. ಬಿಂದು, ಕರುಣಾಸಾಗರ್ ಅವರ ಮಾವನ ಮಗಳು. ಇಬ್ಬರು ಮದುವೆ ಆಗಬೇಕಿದ್ದವರು. ಮನೆಯಲ್ಲಿ ಇಬ್ಬರ ಮದುವೆಗೆ ಒಪ್ಪಿಕೊಂಡಿದ್ದರು. ಧನುಷಾ, ಬಿಂದು ಕ್ಲಾಸ್ಮೇಟ್ ಆಗಿದ್ದರಿಂದ ಕರುಣಾಸಾಗರ್ ಪರಿಚಯವಾಗಿತ್ತು. ಸ್ನೇಹಿತೆ ಕರೆದಳು ಅಂತಾ ಅಪಘಾತದ ದಿನ ಆಕೆ ಜತೆಯಲ್ಲಿ ಹೋಗಿದ್ದೇ ಆಕೆಯ ದಾರುಣ ಸಾವಿಗೆ ಕಾರಣವಾಗಿದೆ.
ಕಾರಿನಲ್ಲಿದ್ದ ಸೇಫ್ಟಿ ಗೇರ್ ಸರಿಯಾದ ಸಮಯದಲ್ಲಿ ಕೆಲಸ ಮಾಡದೇ ಇದ್ದಿದ್ದು ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಇನ್ನೊಂದು ಮೂಲದ ಪ್ರಕಾರ ನೀರಿನ ಬಾಟಲ್ ಬ್ರೇಕ್ ಅಡಿಯಲ್ಲಿ ಸಿಲುಕಿದ್ದರಿಂದ ಬ್ರೇಕ್ ಹಾಕಲಾಗದೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಘಟನೆ ಹಿನ್ನೆಲೆ
ಕೋರಮಂಗಲದ ಮಂಗಳ ಕಲ್ಯಾಣ ಮಂಟಪದ ಬಳಿ ಸೋಮವಾರ ತಡರಾತ್ರಿ 1.30ರ ಸುಮಾರಿಗೆ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ 7 ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ. ಮೃತರಲ್ಲಿ ಕರುಣಾಸಾಗರ್ ಎಂಬಾತ ತಮಿಳುನಾಡು ಡಿಎಂಕೆ ಶಾಸಕನ ಪುತ್ರ. ದುರಂತವೆಂದರೆ, ಮದುವೆ ಆಗಬೇಕಿದ್ದ ಸಂಬಂಧಿ ಯುವತಿ ಬಿಂದು ಜತೆಯಲ್ಲೇ ಕರುಣಾಸಾಗರ್ ಕೊನೆಯುಸಿರೆಳೆದಿದ್ದಾನೆ. ಅವರೊಂದಿಗೆ ಇಶಿತಾ (21), ಡಾ.ಧನುಶಾ (26) ಅಕ್ಷಯ್ ಗೋಯಲ್, ಉತ್ಸವ್ ಮತ್ತು ರೋಹಿತ್ (23) ಎಂಬುವರು ಕೂಡ ಸಾವಿಗೀಡಾಗಿದ್ದಾರೆ. (ದಿಗ್ವಿಜಯ ನ್ಯೂಸ್)