ಕಲಬುರಗಿ: ಪಿಎಸ್ಐ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಎಫ್ಐಆರ್ ದಾಖಲಿಸಿ, ವಿರೇಶ್ ಎಂಬ ಅಭ್ಯರ್ಥಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.
ವಿರೇಶ್ ಬರೆದಿದ್ದ ಒಎಂಆರ್ ಶೀಟ್ನಿಂದಲೇ ಈ ಅಕ್ರಮ ಬಯಲಾಗಿದೆ. ವಿರೇಶ್ ಕಲಬುರಗಿ ಜಿಲ್ಲೆಯ ಸೇಡಂ ಪಟ್ಟಣದ ನಿವಾಸಿ. ವಿರೇಶ್ ತಂದೆ ಸೇಡಂ ಪೊಲೀಸ್ ಠಾಣೆಯಲ್ಲಿ ಹೆಡ್ ಕಾನ್ಸಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೂರು ಬಾರಿ ಪಿಎಸ್ಐ ಪರೀಕ್ಷೆ ಬರೆದಿದ್ದ ವಿರೇಶ್, ಮೂರರಲ್ಲಿಯೂ ಫೇಲ್ ಪಾಸ್ ಆಗಿರಲಿಲ್ಲ. ಹೀಗಾಗಿ ವಯಸ್ಸು ಮೀರಿ ಹೋಗುತ್ತೆ ಅಂತಾ ಅಕ್ರಮವಾಗಿ ನೇಮಕಾತಿ ಪಡೆಯಲು ಮುಂದಾಗಿದ್ದ.
ಕಳೆದ ವರ್ಷ ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆಯ ಕೇಂದ್ರದಲ್ಲಿ ವೀರೇಶ್ ಪರೀಕ್ಷೆ ಬರೆದಿದ್ದ. 20 ಪ್ರಶ್ನೆಗಳಿಗೆ ಉತ್ತರ ಬರೆದಿದ್ದ ವಿರೇಶ್ಗೆ 121 ಮಾರ್ಕ್ಸ್ ಬಂದಿದ್ದರಿಂದ ಅನುಮಾನ ಹುಟ್ಟುಕೊಂಡಿತು. ಜ್ಞಾನ ಜ್ಯೋತಿ ಇಂಗ್ಲಿಷ್ ಮೀಡಿಯಂ ಶಾಲೆ ಬಿಜೆಪಿ ಮುಖಂಡರಿಗೆ ಸೇರಿದ ಶಾಲೆಯಾಗಿದ್ದು, ವಿರೇಶ್ ಜೊತೆಗೆ ಇನ್ನೂ ಹಲವು ವಿದ್ಯಾರ್ಥಿಗಳು ಅಕ್ರಮದಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಸಿಐಡಿ ಅಧಿಕಾರಿಗಳಿಂದ ಅಕ್ರಮದಲ್ಲಿ ಭಾಗಿಯಾಗಿರುವ ವಿದ್ಯಾರ್ಥಿಗಳ ಶೋಧ ಕಾರ್ಯ ನಡೆಯುತ್ತಿದೆ. ಈ ಕೃತ್ಯದಲ್ಲಿ ಮಹಿಳಾ, ಪುರುಷ ಅಭ್ಯರ್ಥಿಗಳು, ಹಲವು ಪೊಲೀಸ್ ಅಧಿಕಾರಿಗಳು, ಪರೀಕ್ಷಾ ಕೊಠಡಿಯ ಮೇಲ್ವಿಚಾರಕರು ಸೇರಿದಂತೆ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.
ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದ್ದು, ಅಧಿಕಾರಿಗಳು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ. ಒಟ್ಟು 545 ಹುದ್ದೆಗಳಿಗೆ ಪರೀಕ್ಷೆ ನಡೆದಿತ್ತು. (ದಿಗ್ವಿಜಯ ನ್ಯೂಸ್)