ಜಿಲ್ಲೆ

ಕೊಟ್ಟ ಹಣ ವಾಪಸ್​ ಕೊಡ್ಲಿಲ್ಲ, ತಂಗಿಯನ್ನೂ ಬಿಡ್ಲಿಲ್ಲ: ಪ್ರಿಯಕರನ ಕೊಲೆ ಮಾಡಿಸಿ ಸಿಕ್ಕಿಬಿದ್ದ ಪ್ರೇಯಸಿ

ಕಲಬುರಗಿ: ಕೊಟ್ಟ ಹಣ ವಾಪಸ್​ ಕೊಡದೇ ಇದ್ದಕ್ಕೆ ಸಂಚು ರೂಪಿಸಿ ಪ್ರೇಯಸಿಯೇ ಪ್ರಿಯಕರನನ್ನು ಕೊಲೆ ಮಾಡಿಸಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಐದು ಲಕ್ಷ ರುಪಾಯಿಗೆ ಸುಪಾರಿ ಕೊಟ್ಟು ಪ್ರಿಯತಮನನ್ನು ಪ್ರೇಯಸಿ ಹತ್ಯೆ ಮಾಡಿಸಿದ್ದಾಳೆ. ಬಿಹಾರ ಮೂಲದ ಸನ್ ಬಿರ್ ಸಿಂಗ್ (27) ಕೊಲೆಯಾದ ಯುವಕ. ಈತ ಆಳಂದ ಮೂಲದ ಮಹಾನಂದಾ ಎಂಬಾಕೆ ಜೊತೆ ಕಳೆದ ಆರು ವರ್ಷದಿಂದ ಲೀವಿಂಗ್ ಟುಗೇದರ್​ನಲ್ಲಿದ್ದ. ಈ ಸಮಯದಲ್ಲಿ ಮಹಾನಂದಾಳಿಂದ ಸನ್​ ಬಿರ್​ 16 ಲಕ್ಷ ರೂ.  ಹಣ ಪಡೆದು ಕೊಡದೆ ಸತಾಯಿಸುತ್ತಿದ್ದ.

ಮಹಾನಂದ ಮನೆಯಲ್ಲಿ ಇಲ್ಲದೆ ಇದ್ದಾಗ ಆಕೆಯ ತಂಗಿಯ ಮೇಲೆಯೂ ಸನ್​ ಬಿರ್​ ಲೈಂಗಿಕ ದೌರ್ಜನ್ಯ ಎಸಗಿದ್ದ. ತಂಗಿಯ ಬಳಿಕ ಮತ್ತೊಬ್ಬ ಮಹಿಳೆಯನ್ನ ತಂದು ಮಹಾನಂದ್ ಮನೆಯಲ್ಲಿ ಸರಸವಾಡಿದ್ದ. ಇದರಿಂದ ರೋಸಿ ಹೋಗಿದ್ದ ಮಹಾನಂದಾ ಸಂಚು ರೂಪಿಸಿ, ಸನ್​ ಬೀರ್​ನ ಕೊಲೆಗೆ 5 ಲಕ್ಷಕ್ಕೆ ಸುಪಾರಿ ನೀಡಿದ್ದಳು.

ಇದಾದ ಬಳಿಕ ಹಂತಕರ ಸನ್​ ಬಿರ್​ ಕೊಲೆ ಮಾಡಿ ರೈಲ್ವೆ ಹಳಿ ಮೇಲೆ ಶವವನ್ನು ಬೀಸಾಡಿ ಹೋಗಿದ್ದರು. ಕೊಲೆ ಪ್ರಕರಣ ಸಂಬಂಧ ಇದೀಗ ಆರು ಆರೋಪಿಗಳನ್ನು ವಾಡಿ ರೈಲ್ವೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಮಹಾನಂದಾ, ಸುನೀಲ್, ಮಂಜ, ಮಾರುತಿ, ಅಶೋಕ್ ಹಾಗೂ ಅಂಬರೀಶ್ ಎಂದು ಗುರುತಿಸಲಾಗಿದೆ. (ದಿಗ್ವಿಜಯ ನ್ಯೂಸ್​)