ಹಾಸನ: ನಿನ್ನೆ (ಆ.2) ಸುರಿದ ಭಾರಿ ಮಳೆಗೆ ಇತಿಹಾಸ ಪ್ರಸಿದ್ಧ ಶ್ರವಣಬೆಳಗೊಳ ಬೆಟ್ಟದ ಮೇಲೆ ಬೃಹತ್ ಬಂಡೆಗಳು ಉರುಳಿ ಬಿದ್ದಿದ್ದು, ಬೆಟ್ಟದ ತಪ್ಪಲಿನಲ್ಲಿ ಇರುವ ಜನರು ಆತಂಕದಲ್ಲಿ ದಿನದೂಡುವಂತಾಗಿದೆ.
ಸಾವಿರಾರು ವರ್ಷ ಇತಿಹಾಸವಿರುವ ಶ್ರವಣಬೆಳಗೊಳದ ಕೋಟೆ ಕುಸಿತವಾಗಿದೆ. ವಿಂಧ್ಯಗಿರಿ ಬೆಟ್ಟದ ಮೇಲೆ ವಿಶ್ವ ವಿಖ್ಯಾತ ಗೊಮ್ಮಟೇಶ್ವರ ಮೂರ್ತಿ ಸುತ್ತಲೂ ಕಟ್ಟಿರುವ ಕೋಟೆಯ ಕಲ್ಲುಗಳು ಭಾರಿ ಮಳೆಗೆ ಉರುಳಿ ಬಿದ್ದಿವೆ.
ಬೆಟ್ಟಕ್ಕೆ ಹತ್ತುವ ದಾರಿ ಮಧ್ಯೆಯೇ ಭಾರಿ ಗಾತ್ರದ ಬಂಡೆಗಳು ಉರುಳಿದ್ದು, ಬೆಟ್ಟದ ತಪ್ಪಲಿನ ಜನ ಆತಂಕಕ್ಕೀಡಾಗಿದ್ದಾರೆ. ಮೆಟ್ಟಿಲುಗಳ ಮೇಲೆ ದೊಡ್ಡ ದೊಡ್ಡ ಕಲ್ಲುಗಳು ಬಿದ್ದಿರುವುದರಿಂದ ಬೆಟ್ಟ ಹತ್ತಲು ಸದ್ಯಕ್ಕೆ ನಿರ್ಬಂಧಿಸಲಾಗಿದೆ.
ಕಳೆದ ಎರಡು ದಿನಗಳಿಂದ ರಾಜ್ಯದಲ್ಲಿ ವರುಣನ ಆರ್ಭಟ ಜೋರಾಗಿದೆ. ಹಳ್ಳ, ಕೊಳ್ಳ ಸೇರಿದಂತೆ ನದಿಗಳು ಉಕ್ಕಿ ಹರಿಯುತ್ತಿದ್ದು, ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸಹ ಮಳೆರಾಯನ ಅಬ್ಬರಕ್ಕೆ ನಲುಗಿದೆ. ಮಳೆಯಿಂದಾಗಿ ಜನ-ಜೀವನ ಅಸ್ತವ್ಯಸ್ತವಾಗಿದೆ. ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. (ದಿಗ್ವಿಜಯ ನ್ಯೂಸ್)