ಹಾಸನ: ಸಾರ್ವಜನಿಕರೇ ಎಚ್ಚರ! ಆನ್ಲೈನ್ ಮೂಲಕ ಪರಿಚವಾದ ವ್ಯಕ್ತಿಯಿಂದ ಮಹಿಳೆಯೊಬ್ಬರು ಬರೋಬ್ಬರಿ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಸರ್ಕಾರಿ ನೌಕರಿಯಲ್ಲಿದ್ದ ಮಹಿಳೆ ಮಾಡಿದ ಒಂದು ಎಡವಟ್ಟು ಇದೀಗ ಆಕೆಯನ್ನು ಕೊರಗುವಂತೆ ಮಾಡಿದೆ. ಹಾಸನದಲ್ಲಿ ನಡೆದ ಈ ಸೈಬರ್ ಕ್ರೈಂ ಸ್ಟೋರಿ ಕೇಳಿದ್ರೆ ನಿಮಗೂ ಶಾಕ್ ಆಗೋದು ಗ್ಯಾರೆಂಟಿ.
ಫೇಸ್ಬುಕ್ನಲ್ಲಿ ಎಲ್ಲವೂ ನಿಜವಲ್ಲ. ಏನೇ ಮಾಡಿದರೂ ಪೂರ್ವಾಪರ ತಿಳಿದುಕೊಂಡು ಮಾಡಿ. ಇಲ್ಲದಿದ್ದರೆ, ಪಶ್ಚಾತಾಪ ಪಡಬೇಕಾಗುತ್ತದೆ. ಆನ್ಲೈನ್ ಲಾಟರಿ ಅಥವಾ ಲಕ್ಕಿ ಡಿಪ್ ಅಂತಾ ಪರಿಚಯ ಮಾಡಿಕೊಂಡು ನಯವಾಗಿ ಮಾತನಾಡುವ ಮಂದಿಗೆ ನೀವು ಮರುಳಾಗಬೇಡಿ. ಈ ಬಗ್ಗೆ ಪೊಲೀಸರು ಹಾಗೂ ಮಾಧ್ಯಮದವರು ಕೂಡ ಹಲವು ಬಾರಿ ಎಚ್ಚರಿಕೆ ನೀಡಿರುವುದನ್ನು ನೀವು ಗಮನಿಸಬಹುದು. ಆದರೂ ಜನ ಮೋಸ ಹೋಗುವುದು ಮಾತ್ರ ನಿಂತಿಲ್ಲ. ಏಕೆಂದರೆ, ಹಾಸನದಲ್ಲಿ ಓರ್ವ ಮಹಿಳೆ ಸೈಬರ್ ವಂಚನೆಯಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ 14 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಫೇಸ್ಬುಕ್ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ನಿಮಗೆ ಲಕ್ಕಿ ಡಿಪ್ ಬಂದಿದೆ ಅಂತ ಸ್ನೇಹ ಬೆಳೆಸಿದ್ದಾನೆ. ಜತೆಗೆ ನಿಮಗೆ ದೊಡ್ಡ ಮೊತ್ತದಲ್ಲಿ ಲೋನ್ ಕೊಡಿಸುತ್ತೇನೆ ಅಂತಾ ಮಹಿಳೆಯನ್ನು ಹಂತ ಹಂತವಾಗಿ ನಂಬಿಸಿದ್ದಾನೆ. ಆದ್ರೆ, ಸಾಲ ನೀಡಬೇಕಾದ್ರೆ ನೀವು ಬೇರೆ ಖಾತೆಗಳನ್ನು ತೆರೆದು ಆ ಖಾತೆಯ ಎಟಿಎಂ, ಪಾಸ್ ಬುಕ್ ಮತ್ತು ಹೊಸ ಸಿಮ್ ಖರೀದಿಸಿ ಅವುಗಳನ್ನ ನನಗೆ ಕಳಿಸಿ ಅಂತ ನಂಬಿಸಿ ಉಂಡೆನಾಮ ಹಾಕಿದ್ದಾನೆ.
ವಂಚಕ ಹೇಳಿದ ಮಾತನ್ನು ಚಾಚೂ ತಪ್ಪದೇ ಪಾಲಿಸಿದ ಮಹಿಳೆ ತನ್ನ ಸಂಬಂಧಿಗಳಿಂದ ಬೇರೆ ಬ್ಯಾಂಕ್ ಖಾತೆ ಓಪನ್ ಮಾಡಿಸಿ, ಅದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ವಂಚಕನಿಗೆ ಕಳಿಸಿದ್ದಾಳೆ. ಜೊತೆಗೆ ಆತ ಹಣ ಕೇಳಿದಾಗಲೆಲ್ಲಾ ಖಾತೆಗೆ ಹಂತ ಹಂತವಾಗಿ ಹಾಕಿ, ಸುಮಾರು 14 ಲಕ್ಷ ರೂಪಾಯಿ ಕಳೆದು ಕೊಂಡಿದ್ದಾರೆ.
ಸದ್ಯ ಈ ಬಗ್ಗೆ ಹಾಸನ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆದ್ರೆ ಆರೋಪಿ ಸುಳಿವು ಪತ್ತೆ ಹಚ್ಚುವುದೇ ಈಗ ಪೊಲೀಸರಿಗೆ ಸವಾಲಾಗಿದೆ. ಈ ರೀತಿ ಘಟನೆ ನಡೆದ 24 ಗಂಟೆ ಒಳಗೆ ಪೊಲಿಸರಿಗೆ ತಿಳಿಸಿದ್ರೆ ಮಾತ್ರ ಹಣ ಆರೋಪಿಗಳ ಕೈಸೇರೋದನ್ನು ತಪ್ಪಿಸಬಹುದು ಅಂತ ಹಾಸನ ಎಸ್ಪಿ ಎಚ್ಚರಿಕೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)