ಜಿಲ್ಲೆ

ಯೂಕ್ರೇನ್​ನಲ್ಲಿ ಕನ್ನಡಿಗ ನವೀನ್​ ಸಾವು: ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಸಂತಾಪ

ಬೆಂಗಳೂರು: ಯೂಕ್ರೇನ್​ ಮತ್ತು ರಷ್ಯಾ ನಡುವಿನ ಯುದ್ಧದಲ್ಲಿ ಗುಂಡಿನ ದಾಳಿಗೆ ಬಲಿಯಾದ ಕನ್ನಡಿಗೆ ನವೀನ್ ಗ್ಯಾನಗೌಡರ​ ಸಾವಿಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಅವರು ಸಂತಾಪ ಸೂಚಿಸಿದ್ದಾರೆ.

ಯೂಕ್ರೇನ್​ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕರ್ನಾಟಕದ ವಿದ್ಯಾರ್ಥಿ ನವೀನ್​ ನಿಧನದಿಂದ ದುಃಖವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆಂದು ಗೆಹಲೋತ್ ಅವರು ಟ್ವೀಟ್​ ಮೂಲಕ ಕನ್ನಡದಲ್ಲೇ ಸಂತಾಪ ಸೂಚಿಸಿದ್ದಾರೆ. ಅಲ್ಲದೆ, ನವೀನ್​ ಕುಟುಂಬಕ್ಕೆ ಕರೆ ಮಾಡಿ ಸಾಂತ್ವಾನ ಹೇಳಿರುವುದಾಗಿ ರಾಜಭವನ ಟ್ವೀಟ್​ ಮಾಡಿದೆ.

ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮದ ನವೀನ ಗ್ಯಾನಗೌಡರ, ಕಾರ್ಕಿವ್ ನಗರದಲ್ಲಿ ನವೀನ್​ ಎಂಬಿಬಿಎಸ್ ಓದುತ್ತಿದ್ದ. ಯೂಕ್ರೇನ್​ ಮೇಲೆ ರಷ್ಯಾ ಸೇನಾಪಡೆ ಯುದ್ಧ ಮುಂದುವರಿಸಿದ್ದು, ನಿನ್ನೆ ನಡೆದ ದಾಳಿಯಲ್ಲಿ ನವೀನ್​ ಮೃತಪಟ್ಟಿದ್ದಾರೆ.

ನಿನ್ನೆ ನಡೆದ ಘಟನೆಯನ್ನು ಮೃತ ನವೀನ್​ ಸ್ನೇಹಿತ ಆರ್​. ಗೌತಮ್​ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಗತ್ಯ ವಸ್ತುಗಳನ್ನು ಖರೀದಿಸಲು ನವೀನ್​ ಜತೆ ನಾವೆಲ್ಲ ತೆರಳಿದ್ದೆವು. ಆ ಕ್ಷಣದಲ್ಲಿ ದಿಢೀರನೇ ಫೈರಿಂಗ್​ ಶುರುವಾಯಿತು. ನಮ್ಮನ್ನು ನಾವು ಕಾಪಾಡಿಕೊಳ್ಳಲು ಓಡೋಡಿ ಬರುತ್ತಿದ್ದೆವು. ಅಷ್ಟರಲ್ಲಿ ನವೀನ್​ ಮೇಲೆ ಗುಂಡಿನ ದಾಳಿ ಆಯಿತು. ಆತ ಸ್ಥಳದಲ್ಲೇ ಮೃತಪಟ್ಟ. ನಾವು ನವೀನ್​ ಸಮೀಪಕ್ಕೆ​ ತೆರಳಲು ಪ್ರಯತ್ನಿಸಿದೆವು. ಆದರೆ, ಗುಂಡಿನ ದಾಳಿ ಮುಂದುವರಿದರಿಂದ ನವೀನ್​ ಬಳಿ ತಲುಪಲ ನಮಗೆ ಸಾಧ್ಯವಾಗಲಿಲ್ಲ ಎಂದು ಗೌತಮ್​ ತಮ್ಮ ಅಸಹಾಯಕತೆ ಜತೆ ಮುಂದೇನಾಗುತ್ತೋ ಎಂಬ ಭಯವನ್ನು ವ್ಯಕ್ತಪಡಿಸಿದ್ದಾರೆ.

ಯೂಕ್ರೇನ್​ ಮೇಲೆ ರಷ್ಯಾ ಯುದ್ಧ ಘೋಷಣೆ ಮಾಡಿದಾಗಿನಿಂದ ಮಗ ಹುಟ್ಟೂರಿಗೆ ಸುರಕ್ಷಿತವಾಗಿ ಬಂದ್ರೆ ಸಾಕಪ್ಪ ಎಂದು ಪಾಕಲರು-ಕುಟುಂಬಸ್ಥರು ಕಣ್ಣೀರು ಹಾಕುತ್ತಾ ದೇವರ ಬಳಿ ಲೆಕ್ಕವಿಲ್ಲದಷ್ಟು ಬಾರಿ ಬೇಡಿಕೊಂಡಿದ್ದರು. ಆದರೂ ಮಗ ಬದುಕಲಿಲ್ಲ ಎಂಬ ಸುದ್ದಿ ಕೇಳಿ ನವೀನ್​ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.