ಜಿಲ್ಲೆ

ನಕಲಿ ಪೋಲಿಸಪ್ಪನ ಅಸಲಿ ಕಹಾನಿ:​ ಯುವಕ ತೋಡಿದ ಖೆಡ್ಡಾಗೆ ನಕಲಿ SI ಬಿದ್ದದ್ದೇ ರೋಚಕ!

ಬೆಂಗಳೂರು: ನಿವೃತ್ತ ಪೋಲೀಸ್ ಅಧಿಕಾರಿ ಎಂದು ನಂಬಿಸಿ, ಕೆಲಸ ಕೊಡಿಸುವುದಾಗಿ ಸಾಕಷ್ಟು ಯುವಕರಿಗೆ ಮಕ್ಮಲ್ ಟೋಪಿಯಾಕಿರುವ ನಕಲಿ ಪೋಲಿಸಪ್ಪನ ಅಸಲಿ ಕಹಾನಿ ಇದೀಗ ಬಯಲಿಗೆ ಬಂದಿದೆ.

ಆರೋಪಿಯ ಹೆಸರು ಜ್ಞಾನಮೂರ್ತಿ. ಈತ ದೊಡ್ಡಬಳ್ಳಾಪುರ ಮೂಲದ ನಿವಾಸಿ. ತಾನು ನಿವೃತ್ತ ಪೊಲೀಸ್​ ಸಬ್​ಇನ್ಸ್​ಪೆಕ್ಟರ್​ ಎಂದು ಹೇಳಿಕೊಂಡು ಪೋಲೀಸ್ ಕೆಲಸ ಕೊಡಿಸುವುದಾಗಿ ನಂಬಿಸಿ, ಆನೇಕಲ್ ಪಟ್ಟಣದಲ್ಲಿ ಸಾಕಷ್ಟು ಯುವಕರಿಗೆ ವಂಚಿಸಿದ್ದಾನೆ.

ಆನೇಕಲ್-ಥಳಿ ಮುಖ್ಯ ರಸ್ತೆಯ ಸಿಕೆ ಬಾರ್ ಅಂಡ್ ರೆಸ್ಟೋರೆಂಟ್​ಗೆ ಬಂದಿದ್ದ ಜ್ಞಾನಮೂರ್ತಿ, ಆನೇಕಲ್ ಭಾಗದಲ್ಲಿ 80 ಲಕ್ಷ ರೂಪಾಯಿಗೆ ಜಮೀನು ಖರೀದಿ ಮಾಡಿದ್ದೇನೆಂದು ಪರಿಚಯ ಮಾಡಿಕೊಂಡಿದ್ದ. ನಾನು ನಿವೃತ್ತ ಪೋಲೀಸ್ ಸಬ್ ಇನ್ಸ್‌ಪೆಕ್ಟರ್, ನನಗೆ ಡಿಸ್ಕೌಂಟ್​ನಲ್ಲಿ ರೂಮ್​ ಕೊಡಿ ಎಂದು ಕೇಳಿದ್ದ. ಅದರಂತೆಯೇ ರೆಸ್ಟೋರೆಂಟ್​ ಸಿಬ್ಬಂದಿ ರೂಮ್ ಬಾಡಿಗೆ ನೀಡಿದ್ದರು.

ಜಮೀನು ವ್ಯವಹಾರ ಮುಗಿಯುವವರೆಗೂ ಬಂದು ಹೋಗುತ್ತೇನೆಂದು ರೂಮ್ ಬಾಡಿಗೆ ಪಡೆದಿದ್ದ ಜ್ಞಾನಮೂರ್ತಿ, ಬಾರ್ ಸಿಬ್ಬಂದಿ ಕಿಶೋರ್ ಹಾಗೂ ಕ್ಯಾಶಿಯರ್ ಆನಂದ್​ರನ್ನು ಪರಿಚಯ ಮಾಡಿಕೊಂಡಿದ್ದ. ಇದಾದ ಬಳಿಕ ನಕಲಿ ಪೋಲಿಸ್ ಜ್ಞಾನಮೂರ್ತಿಯ ಅಸಲಿ ಆಟ ಶುರುವಾಗಿದೆ. ನಿಮಗೆ ಪೋಲೀಸ್ ಕೆಲಸ ಕೊಡಿಸುತ್ತೇನೆ. ಡಿಜಿಪಿ ಪಿಎ ನನ್ನ ಸ್ನೇಹಿತರು ಎಂದು ಯುವಕರ ಬಳಿ ಡ್ರಾಮ ಮಾಡಿದ್ದ.

ಕ್ಯಾಷಿಯರ್ ಆನಂದ್ ಬಳಿ ಜ್ಞಾನಮೂರ್ತಿ 30 ಸಾವಿರ ಹಾಗೂ ಬಾರ್ ಸಪ್ಲೈಯರ್ ಕಿಶೋರ್ ಬಳಿ 45 ಸಾವಿರ ಹಣ ಪಡೆದಿದ್ದ. ಡಿಜಿಪಿ ಪಿಎ ಎಂದು ವ್ಯಕ್ತಿಯೊಬ್ಬರ ಬಳಿಕ ಪೋನ್ ಮೂಲಕ ಮಾತನಾಡಿಸಿ ನಂಬಿಸಿದ್ದ. ಬೆಂಗಳೂರಿಗೆ ಕರೆದೊಯ್ದ ನಾಲ್ಕೈದು ಬಿಲ್ಡಿಂಗ್ ತೋರಿಸಿ ನಂದೆ ಎಂದು ಪೋಸ್ ಕೊಟ್ಟಿದ್ದ. ಅಲ್ಲದೆ, ತನ್ನ ಬಗ್ಗೆ ಸಾಕಷ್ಟು ಹೇಳಿಕೊಳ್ಳುತ್ತಿದ್ದ. ಇದರಿಂದ ಅನುಮಾನಗೊಂಡ ಯುವಕರು ದುಡ್ಡು ತಂದಿದ್ದೇನೆಂದು ಹೇಳಿ, ಆನೇಕಲ್​ನಿಂದ ಕರೆಸಿಕೊಂಡು ಹಿಡಿದು ಥಳಿಸಿ, ವಿಚಾರಿಸಿದಾಗ ಪೋಲೀಸಪ್ಪನ ನಕಲಿ ಆಟ ಬಯಲಲಾಗಿದೆ.

ಇಷ್ಟೇ ಅಲ್ಲದೆ ಮುತ್ಯಾಲ ಮಡು ಪ್ರವಾಸಿ ತಾಣದಲ್ಲಿದ್ದ ಯುವಕರಿಗೂ ಜ್ಞಾನಮೂರ್ತಿ ಮೋಸ ಮಾಡಿದ್ದಾನೆ. ಮೈಸೂರು ಕುದುರೆ ಹಾಗೂ ಪೆಟ್ಟಿ ಅಂಗಡಿ ಕೊಡಿಸುವುದಾಗಿ ರವಿ ಎಂಬಾತನಿಂದ 75 ಸಾವಿರ ಹಣವನ್ನು ವಂಚಿಸಿದ್ದಾನೆ. ವಂಚನೆಗೆ ಒಳಗಾದ ಯುವಕರಿಂದ ಆನೇಕಲ್ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹಲವು ಕಡೆಗಳಲ್ಲಿ ಇದೇ ರೀತಿ ಸಾಕಷ್ಟು ವಂಚನೆ ಮಾಡಿರುವ ಶಂಕೆ ವ್ಯಕ್ತವಾಗಿದೆ. (ದಿಗ್ವಿಜಯ ನ್ಯೂಸ್​)