ಜಿಲ್ಲೆ

ಠಾಣೆಯ ಮುಂದೆ ನಿಲ್ಲಿಸಿದ್ದ ಪೊಲೀಸ್​ ವಾಹನವನ್ನೇ ಕದ್ದೊಯ್ದು ಭೂಪ: ಆತ ಹೇಳಿದ್ದನ್ನು ಕೇಳಿ ದಂಗಾದ ಪೊಲೀಸರು!

ಧಾರವಾಡ: ಪೊಲೀಸ್ ಠಾಣೆಯ ಮುಂದೆ ನಿಲ್ಲಿಸಿದ ಪೊಲೀಸ್​ ವಾಹನವನ್ನೇ ಖದೀಮನೊಬ್ಬ ಎಗರಿಸಿರುವ ಘಟನೆ ಜಿಲ್ಲೆಯ ಅಣ್ಣಿಗೇರಿ ಠಾಣೆಯಲ್ಲಿ ನಡೆದಿದೆ.

ನಾಗಪ್ಪ‌ ಹಡಪದ ಎಂಬಾತನಿಂದ‌ ಕಳ್ಳತನ ನಡೆದಿದೆ. ಈತ ಅಣ್ಣಿಗೇರಿ ಅಂಬಿಕಾ ನಗರ ನಿವಾಸಿ. ಠಾಣೆಯ ಕೆಲಸಕ್ಕೆ ಬಳಸುತ್ತಿದ್ದ ಬೊಲೆರೋ ವಾಹನವನ್ನು ಕಳ್ಳತನ ಮಾಡಿಕೊಂಡು ಬ್ಯಾಡಗಿವರೆಗೂ ಹೋಗಿದ್ದ. ಬಳಿಕ ವಾಹನವನ್ನು ತಡೆದು ಆತನನ್ನು ಪೊಲೀಸರು ವಶಕ್ಕೆ ಪಡೆಡು ಠಾಣೆಗೆ ಕರೆತಂದಿದ್ದಾರೆ.

ಪೊಲೀಸ್​ ವಾಹನ ಯಾರು ಮುಟ್ಟುತ್ತಾರೆ ಎಂದು ಸಿಬ್ಬಂದಿ ಕೀ ಅನ್ನು ವಾಹನದಲ್ಲೇ ಬಿಟ್ಟಿದ್ದರು. ನಿತ್ಯ ಬೆಳಗ್ಗೆ ರೌಂಡ್ಸ್ ಹೋಗಲು ವಾಹನವನ್ನು ಸಿಬ್ಬಂದಿ ಬಳಸುತ್ತಿದ್ದರು. ಕೀ ಇದ್ದಿದ್ದನ್ನು ನೋಡಿ ನಾಗಪ್ಪ ಕದ್ದುಕೊಂಡು ಹೋಗಿದ್ದ. ವಿಚಾರಣೆ ವೇಳೆ ಆತ ಹೇಳಿದ್ದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ.

ಪೊಲೀಸ್​ ವಾಹನ ಚಲಾಯಿಸಬೇಕೆಂಬುದು ಆತನ ಆಸೆಯಂತೆ. ಇದ್ದಕ್ಕಾಗಿ ಆಗಾಗ ಪೊಲೀಸ್​ ಠಾಣೆಗೆ ಬಂದು ಸಂಚು ರೂಪಿಸುತ್ತಿದ್ದನಂತೆ. ಅಲ್ಲದೆ, ಸಿಬ್ಬಂದಿಯ ಜತೆ ಸ್ನೇಹವನ್ನು ಬೆಳೆಸಿಕೊಂಡಿದ್ದ. ಎಸ್​ಐ ರಜೆಯಲ್ಲಿದ್ದ ಸಮಯವನ್ನು ನೋಡಿ ಕಾರು ಎಗರಿಸಿಕೊಂಡು ಹೋಗಿ ಇದೀಗ ಸಿಕ್ಕಿಬಿದ್ದಿದ್ದಾನೆ.

ಈ ಸಂಬಂಧ ಅಣ್ಣಿಗೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. (ದಿಗ್ವಿಜಯ ನ್ಯೂಸ್​)