ವಿಜಯನಗರ: ಪದ್ಮಶ್ರೀ ಪುರಸ್ಕೃತೆ ಮಂಜಮ್ಮ ಜೋಗತಿಯವರಿಗೆ ಗೌರವ ಸೂಚಿಸಲು ಹೋಗಿ ಅಗೌರವ ತೋರಿದ ಕೆಎಸ್ಆರ್ಟಿಸಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಕೆಎಸ್ಆರ್ಟಿಸಿ ತನ್ನ ತಪ್ಪನ್ನು ಸರಿಪಡಿಸಿಕೊಂಡಿದೆ.
ಆಗಿದ್ದೇನು?
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಜಯನಗರ ಜಿಲ್ಲೆಯ ತೃತೀಯ ಲಿಂಗಿ ಮಾತಾ ಮಂಜಮ್ಮ ಜೋಗತಿಯವರಿಗೆ ಸಾರಿಗೆ ಇಲಾಖೆಯಿಂದ... ಅಂತಾ ಈ ಹಿಂದೆ ಸಾರಿಗೆ ಇಲಾಖೆ ಟಿಕೆಟ್ ಮೇಲೆ ಬರೆದಿತ್ತು. ಟಿಕೆಟ್ನಲ್ಲಿ ಗೌರವ ಅಥವಾ ಅಭಿನಂದನೆ ಅಂತಾ ಸೂಚಿಸದೇ, ವಾಕ್ಯ ಪೂರ್ಣಗೊಳಿಸದೇ ಅರ್ಧಕ್ಕೆ ಮೊಟಕುಗೊಳಿಸುವ ಮೂಲಕ ಸಾರಿಗೆ ಇಲಾಖೆ ಅಗೌರವ ಸೂಚಿಸಿತ್ತು. ಹೊಸಪೇಟೆಯಿಂದ ಸಂಡೂರು ಘಟಕಕ್ಕೆ ಹೋಗಬೇಕಾದರೆ ಪಡೆದಿರುವ ಟಿಕೆಟ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ತೀವ್ರ ಆಕ್ರೋಶ
ಈ ಬಗ್ಗೆ ವಿಜಯವಾಣಿ ಪತ್ರಿಕೆ ಮತ್ತು ವೆಬ್ಸೈಟ್ ಎರಡರಲ್ಲೂ ಸುದ್ದಿ ಪ್ರಕಟವಾಗಿತ್ತು. ದಿಗ್ವಿಜಯ ನ್ಯೂಸ್ ಮತ್ತು ವಿಜಯವಾಣಿ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಶೇರ್ ಆಗಿತ್ತು. ಇದರ ಬೆನ್ನಲ್ಲೇ ಪೋಸ್ಟ್ ಎಲ್ಲೆಡೆ ವೈರಲ್ ಆಗಿ ನೆಟ್ಟಿಗರು ಕೆಎಸ್ಆರ್ಟಿಸಿಯ ಬೇಜವಬ್ದಾರಿ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದೀಗ ಎಚ್ಚೆತ್ತುಕೊಂಡಿರುವ ಕೆಎಸ್ಆರ್ಟಿಸಿ ತನ್ನ ತಪ್ಪನ್ನು ಸರಿಮಾಡಿಕೊಂಡಿದೆ.
ಮರು ಮುದ್ರಿಸಿದ ಕೆಎಸ್ಆರ್ಟಿಸಿ
ನಿಗಮದ ಎಲ್ಲಾ ಘಟಕಗಳ ಟಿಕೆಟ್ ಮೇಲೆ ಪದ್ಮಶ್ರೀ ಪುರಸ್ಕೃತ ಶ್ರೀಮಾತೆ ಮಂಜಮ್ಮ ಜೋಗತಿಯವರಿಗೆ ಅಭಿನಂದನೆಗಳು ಅಂತ ಮರು ಮುದ್ರಣ ಮಾಡಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿಯ ಮಾತಾ ಶ್ರೀ ಮಂಜಮ್ಮ ಜೋಗತಿಯವರಿಗೆ ಇತ್ತಿಚೀಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. (ದಿಗ್ವಿಜಯ ನ್ಯೂಸ್)