ಜಿಲ್ಲೆ

ಬ್ಯಾಂಕ್ ಖಾತೆಗೆ ಪಾನ್ ನಂಬರ್ ಲಿಂಕ್ ಸೋಗಲ್ಲಿ ಕರೆ ಮಾಡಿ ಶಂಕರ್ ಬಿದರಿಗೆ 89 ಸಾವಿರ ಧೋಖಾ

ಬೆಂಗಳೂರು: ಬ್ಯಾಂಕ್ ಖಾತೆಗೆ ಪಾನ್‌ಕಾರ್ಡ್ ನಂಬರ್ ಲಿಂಕ್ ಮಾಡಬೇಕೆಂದು ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಶಂಕರ್ ಬಿದರಿ ಅವರಿಗೆ ಕರೆ ಮಾಡಿ 89 ಸಾವಿರ ರೂ. ವಂಚನೆ ಮಾಡಿದ್ದಾರೆ. ಈ ಕುರಿತು ಶಂಕರ್ ಬಿದರಿ ದೂರು ನೀಡಿದ್ದಾರೆ. ಇದರ ಅನ್ವಯ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್​ಐಆರ್ ಮಾಡಿಕೊಂಡು ಆಗ್ನೇಯಾ ವಿಭಾಗ ಸಿಇಎನ್ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಅ.11ರಂದು ಎಸ್‌ಬಿಐ ಬ್ಯಾಂಕ್ ಕಡೆಯಿಂದ ಶಂಕರ್ ಬಿದರಿ ಅವರು ಸಂದೇಶ ಸ್ವೀಕರಿಸಿದ್ದಾರೆ. ಅದರಲ್ಲಿ ನಿಮ್ಮ ಬ್ಯಾಂಕ್ ಖಾತೆಗೆ ಪಾನ್ ನಂಬರ್ ಅಪ್‌ಡೇಟ್ ಮಾಡಬೇಕು. ಒಂದು ವೇಳೆ ಮಾಡದೆ ಇದ್ದರೇ ಖಾತೆ ಸ್ಥಗಿತವಾಗಲಿದೆ ಎಂದು ಉಲ್ಲೇಖಿಸಲಾಗಿತ್ತು. ಇದಾದ ಮೇಲೆ ಮೊಬೈಲ್‌ಗೆ ಕರೆ ಬಂದಿದ್ದು, ಎಸ್‌ಬಿಐ ಸಹಾಯವಾಣಿಯಿಂದ ಎಂದು ಹೇಳಿದ್ದಾರೆ.

ಬ್ಯಾಂಕ್ ಖಾತೆಗೆ ಪಾನ್ ನಂಬರ್ ಲಿಂಕ್ ಮಾಡಬೇಕಿದೆ. ಅದಕ್ಕಾಗಿ ನಿಮ್ಮ ಮೊಬೈಲ್‌ಗೆ ಬರುವ ಒಟಿಪಿ ನಂಬರ್ ತಿಳಿಸುವಂತೆ ಮನವಿ ಮಾಡಿದ್ದು, ಇದನ್ನು ನಂಬಿದ ಶಂಕರ್ ಬಿದರಿ ಅವರು ಒಟಿಪಿ ನಂಬರ್ ಹೇಳಿದ್ದಾರೆ. ಹೇಳಿದ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್ ಖಾತೆಯಿಂದ 89 ಸಾವಿರ ರೂ. ಕಡಿತವಾಗಿದೆ. ಬ್ಯಾಂಕ್ ಅಧಿಕಾರಿ ಸೋಗಿನಲ್ಲಿ ಕರೆ ಮಾಡಿ ವಂಚನೆ ಮಾಡಿದ ವ್ಯಕ್ತಿಯನ್ನು ಪತ್ತೆ ಮಾಡುವಂತೆ ದೂರು ನೀಡಿದ್ದಾರೆ. ಇದರ ಅನ್ವಯ ಎಫ್​ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.