ಚಿತ್ರದುರ್ಗ: ಪ್ರೇಯಸಿಗೆ ವಿಷಕೊಟ್ಟ ಪ್ರೇಮಿಯೊಬ್ಬ ತಾನು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಿರಿಯೂರು ತಾಲೂಕಿನ ಕೂನಿಕೆರೆ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ಮೃತರನ್ನು ಚಳ್ಳಕೆರೆ ತಾಲೂಕು ಪರಶುರಾಮಪುರ ಗ್ರಾಮದ ತಿಪ್ಪೇಸ್ವಾಮಿ (32), ಹಿರಿಯೂರು ತಾಲೂಕಿನ ಉಡುವಳ್ಳಿ ನಿವಾಸಿ ಪುಷ್ಪಲತಾ (21) ಎಂದು ಗುರುತಿಸಲಾಗಿದೆ.
ಪುಷ್ಪಲತಾ ವಿವಾಹಿತ ತಿಪ್ಪೇಸ್ವಾಮಿಯನ್ನು ಪ್ರೀತಿಸುತ್ತಿದ್ದಳು. ತಿಪ್ಪೇಸ್ವಾಮಿ ಜತೆ ವಿವಾಹ ಮಾಡುವಂತೆ ಪಟ್ಟು ಹಿಡಿದಿದ್ದಳು. ಆದರೆ, ವಿವಾಹಿತನ ಜತೆ ಮದುವೆ ಮಾಡಲು ಪಾಲಕರು ನಿರಾಕರಿಸಿದ್ದರು.
ಇದರ ನಡುವೆ ಮೂರು ದಿನಗಳ ಹಿಂದೆ ಮನೆ ಬಿಟ್ಟು ಹೋಗಿದ್ದ ಯುವತಿ ಇದೀಗ ಪ್ರಿಯಕರನ ಜತೆ ಶವವಾಗಿ ಪತ್ತೆಯಾಗಿದ್ದಾಳೆ. ಈ ಸಂಬಂಧ ಹಿರಿಯೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್)