ಜಿಲ್ಲೆ

ತಮಿಳುನಾಡಿನಿಂದ ಬಸ್​ನಲ್ಲಿ ಬಂದು ಡಿಯೋ ಬೈಕ್​​ಗಳನ್ನೇ ಕದಿಯುತ್ತಿದ್ದ ಖದೀಮರ ಗ್ಯಾಂಗ್​ ಸಿಕ್ಕಿಬಿದ್ದಿದ್ದೇ ರೋಚಕ!

ಬೆಂಗಳೂರು: ಕುಖ್ಯಾತ ಬೈಕ್​​ ಕಳ್ಳರನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದು, ಬರೋಬ್ಬರಿ 26 ಬೈಕ್​ಗಳನ್ನು ಖದೀಮರ ಗ್ಯಾಂಗ್​ನಿಂದ ವಶಕ್ಕೆ ಪಡೆದಿದ್ದಾರೆ.

ಬಂಧಿತರನ್ನು ತಮಿಳುನಾಡು ಮೂಲದ ನೆಡುಚೆಲಿಯನ್, ತಿರುಪತಿ ಹಾಗೂ ವಲ್ಲರಸು ಎಂದು ಗುರುತಿಸಲಾಗಿದೆ. ಈ ಖದೀಮರು ಡಿಯೋ ಬೈಕ್​​ಗಳನ್ನೆ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದರು.

ತಮಿಳುನಾಡಿನಿಂದ ಬಸ್​ನಲ್ಲಿ ಬರುತ್ತಿದ್ದ ಆರೋಪಿಗಳು, ರಾತ್ರಿ ಹೊತ್ತು ರಸ್ತೆಗಳಲ್ಲಿ ಒಂಟಿಯಾಗಿ ಪಾರ್ಕ್​ ಮಾಡಿದ್ದ ಬೈಕ್​ಗಳನ್ನು ಟಾರ್ಗೆಟ್ ಮಾಡುತ್ತಿದ್ದರು. ಓರ್ವ ಬೈಕ್ ಹತ್ತಿರ ಬಂದು ಲಾಕ್ ಮುರಿದು ಇನ್ನೊಬ್ಬನಿಗೆ ನಿರ್ದೇಶನ ನೀಡುತ್ತಿದ್ದ. ಮತ್ತೊಬ್ಬ ಸ್ವಲ್ಪ ದೂರದಲ್ಲಿ ನಿಂತು ಸಿಗ್ನಲ್ ಕೊಡುತ್ತಿದ್ದ. ಇನ್ನೊಬ್ಬ ಇನ್ನೂ ಸ್ವಲ್ಪ ದೂರದಲ್ಲಿ ನಿಂತು ಯಾರಾದರೂ ಬರ್ತಿದ್ದಾರಾ ಅಂತಾ ನೋಡಿಕೊಳ್ತಿದ್ದ. ಬಳಿಕ ಬೈಕ್ ಕದ್ದು, ಅದೇ ಬೈಕ್​ನಲ್ಲಿ ರಾತ್ರೊರಾತ್ರಿ ತಮಿಳುನಾಡಿಗೆ ಪರಾರಿಯಾಗುತ್ತಿದ್ದರು.

ಕದ್ದ ಬೈಕ್​ ಅನ್ನು ತಮಿಳುನಾಡಿನಲ್ಲಿ 10 ರಿಂದ 15 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು. ಇದೇ ರೀತಿ ಬೈಕ್ ಕದ್ದು ತಮಿಳುನಾಡಿತ್ತ ಆರೋಪಿಗಳು ತೆರಳುತ್ತಿದ್ದಾಗ, ಬೀಟ್ ಪೊಲೀಸರನ್ನು ನೋಡಿ ಹೆದರಿ ಬೈಕ್ ಯೂಟರ್ನ್ ತೆಗೆದುಕೊಳ್ಳುತ್ತಿದ್ದರು. ಇದರಿಂದ ಅನುಮಾಗೊಂಡು ಅವರನ್ನು ಹಿಂಬಾಲಿಸಿ ಹಿಡಿದು ವಿಚಾರಣೆ ಮಾಡಿದಾಗ ಖದೀಮರ ಕೈಚಳಕ ಬಯಲಿಗೆ ಬಂದಿದೆ. (ದಿಗ್ವಿಜಯ ನ್ಯೂಸ್​)