ಬೆಂಗಳೂರು: ಹೆಚ್ಚಿನ ಅಂಕ ಗಳಿಸಿಲ್ಲ ಅಂತಾ ತಂದೆ ಬೈದಿದ್ದಕ್ಕೆ ಕೋಪದಿಂದ ಮನೆಬಿಟ್ಟು, ರೈಲಿನ ಅಡಿಯಲ್ಲಿ ಕೂತು, ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಬಾಲಕನನ್ನು ಆರ್ಪಿಎಫ್ ತಂಡ ಮತ್ತು ಮಕ್ಕಳ ಕಳ್ಳಸಾಗಣೆ ವಿರೋಧಿ ತಂಡ ರಕ್ಷಿಸಿದೆ.
ಬೆಂಗಳೂರಿನ ಮಹಾದೇವಪುರದಲ್ಲಿ ಈ ಘಟನೆ ನಡೆದಿದೆ. ಇದೇ ಅಕ್ಟೋಬರ್ 23ರ ಮಧ್ಯಾಹ್ನ 4.30ಕ್ಕೆ 16 ವರ್ಷದ ಬಾಲಕ ಮನೆ ಬಿಟ್ಟಿದ್ದ. ಮಹದೇವಪುರದಿಂದ ಬೆಂಗಳೂರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ರಾತ್ರಿ 7 ಗಂಟೆಗೆ ಹೊರಡುವ ಕೆಕೆ ಎಕ್ಸ್ಪ್ರೆಸ್ ರೈಲಿನಡಿ ಬಾಲಕ ಮಲಗಿದ್ದ. ಟ್ರೈನ್ ಅಡಿಯಿಂದಲೇ ಸೆಲ್ಫಿ ವಿಡಿಯೋ ಮಾಡಿ, ಅದನ್ನು ಅಂಕಲ್ಗೆ ಕಳುಹಿಸಿದ್ದ. ತಂದೆ ಬೈಯಬಾರದಿತ್ತು ಎಂದು ಕಣ್ಣೀರಾಕುತ್ತಾ ವಿಡಿಯೋದಲ್ಲಿ ಬಾಲಕ ಹೇಳಿದ್ದ.
ಇನ್ನು ವಿಡಿಯೋದಲ್ಲಿ ಟ್ರೈನ್ ಅನೌನ್ಸ್ಮೆಂಟ್ ಕೂಡ ರೆಕಾರ್ಡ್ ಆಗಿತ್ತು. ಕೆಎಸ್ಆರ್ ರೈಲ್ವೆ ನಿಲ್ದಾಣದ ಬಗ್ಗೆ ಅನೌನ್ಸ್ಮೆಂಟ್ ಆಗಿದ್ದನ್ನು ಕೇಳಿ ಕೂಡಲೇ ಮೆಜೆಸ್ಟಿಕ್ ರೈಲ್ವೆ ನಿಲ್ದಾಣಕ್ಕೆ ಬಾಲಕನ ಪೋಷಕರು ಆಗಮಿಸಿ, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಬಳಿಕ ಆರ್ಪಿಎಫ್ ತಂಡ ಮತ್ತು ಮಕ್ಕಳ ಕಳ್ಳಸಾಗಣೆ ವಿರೋಧಿ ತಂಡ ಕಾರ್ಯಚರಣೆ ನಡೆಸಿದಾಗ ಬಾಲಕ ಕೆಕೆ ಎಕ್ಸ್ಪ್ರೆಸ್ ಟ್ರೈನ್ ಅಡಿ ಇರುವುದು ಪತ್ತೆ ಆಯಿತು.
ಕೊನೆಗೆ ಬಾಲಕನನ್ನು ರಕ್ಷಿಸಿದ ಆರ್ಪಿಎಫ್ ಟೀಂ, ಆತನಿಗೆ ಮತ್ತು ಪಾಲಕರಿಗೆ ಬುದ್ಧಿವಾದ ಹೇಳಿ, ಪೋಷಕರಿಗೆ ಒಪ್ಪಿಸಿದರು. (ದಿಗ್ವಿಜಯ ನ್ಯೂಸ್)