ಜಿಲ್ಲೆ

ಸಾಕು ತಂದೆ-ತಾಯಿಯಿಂದಲೇ ಯುವತಿಗೆ ಮಹಾ ಮೋಸ: ವಿಷ ಸೇವಿಸಿದ್ರು ಕರಗದ ಮನಸ್ಸು

ಆನೇಕಲ್: ಸಾಕು ತಂದೆ-ತಾಯಿಯಂದಳೇ ಯುವತಿಯೊಬ್ಬಳು ಮೋಸ ಹೋಗಿರುವ ಘಟನೆ ನಡೆದಿದ್ದು, ಒಂಟಿಯಾದ ಯುವತಿ ಇದೀಗ ಮಾಧ್ಯಮಗಳೆದುರು ಕಣ್ಣೀರಾಕಿದ್ದಾಳೆ.

ಆನೇಕಲ್ ತಾಲೂಕಿನ ಜಿಗಣಿಯ ನಿವಾಸಿ ಲಾವಣ್ಯ ಸಾಕುತಂದೆ-ತಾಯಿಯೇ ಮೋಸ ಮಾಡಿರುವುದಾಗಿ ಆರೋಪ ಮಾಡಿದ್ದಾಳೆ. 30 ಲಕ್ಷಕ್ಕೂ ಹೆಚ್ಚು ಹಣವನ್ನು ಕೊಟ್ಟಿರುವುದಾಗಿ ಹೇಳಿಕೆ ನೀಡಿರುವ ಲಾವಣ್ಯ, ಹಣ ಪಡೆದ ಬಳಿಕ ಅದನ್ನು ಹಿಂತಿರುಗಿಸದೇ ಮೋಸ ಮಾಡಿದ್ದಾರೆಂದು ದೂರಿದ್ದಾಳೆ. ಪೊಲೀಸ್ ಠಾಣೆಯ ಮೆಟ್ಟಿಲೇರಿದರು ನ್ಯಾಯ ಸಿಗುತ್ತಿಲ್ಲವೆಂದು ಅಸಹಾಯಕತೆ ಹೊರಗಾಕಿದ್ದಾಳೆ.

ಜಿಗಣಿಯ ಮುನಿರೆಡ್ಡಿ-ನಿರ್ಮಲಾ ಎಂಬುವರಿಂದ ಯುವತಿಗೆ ಮೋಸವಾಗಿದೆ. ಮುನಿರೆಡ್ಡಿ ಪುತ್ರ ದೀಪು ಹಾಗೂ ಪುತ್ರಿ ಪ್ರತಿಮಾ ಮೇಲು ದೂರು ದಾಖಲಾಗಿದೆ. ಲಾವಣ್ಯ ದೂರು ಆಧರಿಸಿ ಜಿಗಣಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಆದರೆ, ಎಫ್​ಐಆರ್​ ದಾಖಲಾಗಿ ದಿನಗಳೇ ಕಳೆದರೂ ಯಾವುದೇ ಕ್ರಮ ತೆಗೆದುಕೊಳ್ಳದಿರುವುದು ಪೊಲೀಸರ ಮೇಲೆ ಅನುಮಾನ ಮೂಡುವಂತಾಗಿದೆ.

ಮುನಿರೆಡ್ಡಿ ಹಾಗೂ ನಿರ್ಮಲ ಚೀಟಿ ವ್ಯವಹಾರ ನಡೆಸುತ್ತಿದ್ದರು. ಜಿಗಣಿಯ ನಿವಾಸಿಗಳಿಂದ ಚೀಟಿ ಹಾಕಿಸಿಕೊಂಡಿದ್ದರು. ಚೀಟಿಯಲ್ಲಿ ನಷ್ಟ ಉಂಟಾದ ಬಳಿಕ ಸಾಕು ಮಗಳಿಂದ ಹಣಪಡೆದಿರುವ ಆರೋಪವಿದೆ. ಸಾಕು ಮಗಳು ಲಾವಣ್ಯ ಬೆಸ್ಕಾಂ ಅಸೋಸಿಯೇಷನ್​ನಲ್ಲಿ ಕೆಲಸ ಮಾಡುತ್ತಿದ್ದಾಳೆ. ಹಣ ತಂದು ಕೊಡಲು ಹೇಳಿದಾಗ ಅಸೋಸಿಯೇಷನ್​ನ 9 ಲಕ್ಷ ಹಣ ನೀಡಿದ್ದಳು.

ಲಾವಣ್ಯ ಅಜ್ಜಿ ಹೆಸರಲ್ಲಿದ್ದ ಮನೆಯ ಮೇಲೂ ಒಂದುವರೆ ಲಕ್ಷ ಸಾಲ ಮಾಡಿದ್ದಳು. 14 ವರ್ಷದಿಂದ ಲಾವಣ್ಯಳನ್ನು ಸಾಕಿದ್ದರಿಂದ ನಂಬಿಕೆಯಿಂದ ಹಣ ತಂದುಕೊಟ್ಟಿದ್ದಳು. ಲಾವಣ್ಯ ಸ್ನೇಹಿತರಿಂದಲೂ ಆಕೆಯ ಹೆಸರಿನಲ್ಲಿ ಮುನಿರೆಡ್ಡಿ 8 ಲಕ್ಷ ರೂಪಾಯಿ ಹಣಪಡೆದಿದ್ದಾರೆ. ಬೇರೆಯವರಿಂದ ಪಡೆದ ಹಣವನ್ನು ವಾಪಸ್ ಕೇಳಿದಾಗ ಲಾವಣ್ಯಳನ್ನು ಬೀದಿಗೆ ತಳ್ಳಿದ್ದಾರೆ.

ತಾಯಿಯನ್ನು ಕಳೆದುಕೊಂಡ ಬಳಿಕ ಲಾವಣ್ಯ ತಂದೆ ವಾಸುದೇವಯ್ಯ ಆಕೆಯನ್ನು ಮುನಿರೆಡ್ಡಿ ದಂಪತಿ ಮನೆಯಲ್ಲಿ ಬಿಟ್ಟಿದ್ದರು. ವಾಸುದೇವಯ್ಯ ಪಕ್ಕದ ಮನೆಯಲ್ಲೇ ಮುನಿರೆಡ್ಡಿ-ನಿರ್ಮಲಾ ದಂಪತಿಗಳಿದ್ದರು. 2018ರಲ್ಲಿ ಲಾವಣ್ಯ ತಂದೆ ವಾಸುದೇವಯ್ಯ ಮರಣ ಹೊಂದಿದ್ದರು. ಇದೇ ಸಂದರ್ಭದಲ್ಲಿ ಮುನಿರೆಡ್ಡಿ ದಂಪತಿ ಚೀಟಿ ವ್ಯವಹಾರದಲ್ಲಿ ನಷ್ಟ ಅನುಭವಿಸಿದ್ದರು.

ಲಾವಣ್ಯ ಬೆಸ್ಕಾಂ ಅಸೋಸಿಯೇಷನ್ ಕಚೇರಿಯನ್ನು ನೋಡಿಕೊಳ್ಳುತ್ತಿದ್ದಳು. ಕಚೇರಿಯ ಹಣ ಲಾವಣ್ಯ ಬಳಿ ಇರುವುದು ಮುನಿರೆಡ್ಡಿ ದಂಪತಿಗೆ ಗೊತ್ತಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಜಮೀನು ಮಾರಿ ಹಣ ಕೊಡುತ್ತೇವೆ ಎಂದು ಹೇಳಿ ಬೆಸ್ಕಾಂ ಅಸೋಸಿಯೇಷನ್​ನ 9 ಲಕ್ಷ ರೂ. ಹಣವನ್ನು ಮುನಿರೆಡ್ಡಿ ದಂಪತಿ ಪಡೆದುಕೊಂಡಿದ್ದರು.

ಕಳೆದ ವರ್ಷ ಆಡಿಟ್ ಸಂದರ್ಭದಲ್ಲಿ ಸಂಸ್ಥೆಯ ಹಣವನ್ನು ಕೊಡುವಂತೆ ಲಾವಣ್ಯ ಕೇಳಿದ್ದಳು. ಈ ಸಂದರ್ಭದಲ್ಲಿ ನಿನಗೆ ಯಾವುದೇ ಹಣ ಕೊಡುವಂತಿಲ್ಲ ಎಂದು ಮುನಿರೆಡ್ಡಿ ದಂಪತಿ ಹೇಳಿದ್ದರು. ಇದರಿಂದ ಭಯಪಟ್ಟು ಲಾವಣ್ಯ ಇದೇ ವರ್ಷ ಏಪ್ರಿಲ್ ತಿಂಗಳಲ್ಲಿ ವಿಷ ಸೇವಿಸಿದ್ದಳು. ಆಸ್ಪತ್ರೆ ಸೇರಿದರೂ ಸಹ ಮುನಿರೆಡ್ಡಿ ನಿರ್ಮಲ, ಯಾವುದೇ ಕನಿಕರ ತೋರಲಿಲ್ಲ.

ಇತ್ತ ಚೀಟಿಗೆ ಹಣ ಹಾಕಿದವರು ಮನೆಯ ಬಳಿ ಬಂದು ಹಣ ಕೇಳಿದಾಗ ಮುನಿರೆಡ್ಡಿ ನಿರ್ಮಲ ಕಳ್ಳಾಟ ಆಡಿದ್ದಾರೆ. ಚೀಟಿ ವ್ಯವಹಾರ ಮಾಡಿದ್ದೆ ಲಾವಣ್ಯ ಎಂದು ಆಕೆಯ ಮೇಲೆ ಆರೋಪಿಸಿದ್ದಾರೆ. ಇದೆಲ್ಲಾ ನೋವಿನಿಂದ ಕುಗ್ಗಿ ಹೋಗಿದ್ದ ಲಾವಣ್ಯ, ಮಹಿಳಾ ಹೋರಾಟಗಾರರ ಬಳಿ ಅಳಲು ತೊಡಿಕೊಂಡಿದ್ದಾಳೆ. ನನಗೆ ನ್ಯಾಯ ಕೊಡಿಸಬೇಕು ಎಂದು ಕಣ್ಣೀರು ಹಾಕಿದ್ದಾಳೆ. ದೂರು ದಾಖಲಾದರೂ ಪೊಲೀಸರು ನ್ಯಾಯ ಒದಗಿಸುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾಳೆ. (ದಿಗ್ವಿಜಯ ನ್ಯೂಸ್​)