ಬೆಂಗಳೂರು: ಸಿಲಿಕಾನ್ ಸಿಟಿ ಭಾರಿ ಮಳೆಗೆ ತತ್ತಿರಿಸಿ ಹೋಗಿದೆ. ನಗರದಲ್ಲಿ ಎಲ್ಲಿ ನೋಡಿದರೂ ನೀರು ತುಂಬಿದೆ. ಹೀಗಾಗಿ ಜನರು ಅಥವಾ ವಾಹನ ಸವಾರರು ಓಡಾಡುವಾಗ ತುಂಬಾ ಎಚ್ಚರಿಕೆ ವಹಿಸಬೇಕು. ಆದಷ್ಟು ಓಡಾಟ ಕಡಿಮೆ ಮಾಡಿದರೆ ಒಳ್ಳೆಯದು. ಪ್ರವಾಹದಿಂದ ಎಲ್ಲೆಡೆ ನೀರು ತುಂಬಿದ್ದು, ವಿದ್ಯುತ್ ಕಂಬಗಳ ಬಳಿ ನಿಲ್ಲುವುದಾಗಲಿ ಅಥವಾ ಕಂಬಗಳನ್ನು ಸ್ಪರ್ಶಿಸುವುದಾಗಲಿ ಮಾಡಬೇಡಿ. ತೇವಾಂಶ ಇರುವುದರಿಂದ ಕೆಲವು ಕಂಬಗಳಲ್ಲಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗುವ ಸಾಧ್ಯತೆ ಇದೆ. ನಿನ್ನೆ (ಸೆ. 05) ರಾತ್ರಿ ದುರಂತ ಘಟನೆ ಒಂದು ನಡೆದಿದ್ದು, ಯುವತಿಯೊಬ್ಬಳು ವಿದ್ಯುತ್ ಶಾಕ್ನಿಂದಾಗಿ ಕೊನೆಯುಸಿರೆಳೆದಿದ್ದಾಳೆ.
ಅಖಿಲಾ (23) ಮೃತಪಟ್ಟ ಯುವತಿ. ಬೆಸ್ಕಾಂ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಯುವತಿ ಜೀವ ಕಳೆದುಕೊಂಡಿದ್ದಾರೆ. ವೈಟ್ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ, ಮಾರತ್ತಹಳ್ಳಿಯಿಂದ ವರ್ತೂರು ಕೋಡಿ ಮಾರ್ಗ ಮಧ್ಯೆ ಇರುವ ಸಿದ್ದಾಪುರದಲ್ಲಿ ದುರಂತ ಘಟನೆ ನಡೆದಿದೆ.
ಬಿಕಾಂ ಪದವೀಧರೆಯಾಗಿದ್ದ ಅಖಿಲಾ, ಖಾಸಗಿ ಖಾಲೆಯೊಂದರ ಆಡಳಿತ ವಿಭಾಗದಲ್ಲಿ ಕಳೆದ ಎರಡು ವರ್ಷದಿಂದ ಕೆಲಸ ಮಾಡುತ್ತಿದ್ದರು. ತಂದೆ-ತಾಯಿ ಜೊತೆಗೆ ಸಿದ್ದಾಪುರದಲ್ಲಿರುವ ಮನೆಯಲ್ಲಿ ವಾಸವಿದ್ದರು. ನಿನ್ನೆ ರಾತ್ರಿ 8 ಗಂಟೆಗೆ ಶಾಲೆಯಲ್ಲಿ ಕೆಲಸ ಮುಗಿಸಿ ತನ್ನ ಆ್ಯಕ್ಟೀವಾ ಬೈಕ್ನಲ್ಲಿ ಹೊರಟ ಅಖಿಲಾ, ರಾತ್ರಿ 9.30ಕ್ಕೆ ಸಿದ್ದಾಪುರ ಬಳಿ ಇರುವ ಮಯೂರ ಬೇಕರಿ ಸಮೀಪ ಬಂದಿದ್ದಾರೆ. ರಸ್ತೆಯಲ್ಲಿ ಮಂಡಿಯುದ್ದಕ್ಕೆ ನೀರು ನಿಂತಿದ್ದರೂ, ಅದರ ಮಧ್ಯೆಯೇ ಸ್ಕೂಟರ್ ಚಲಾಯಿಸಿದ್ದಾರೆ.
ನೀರು ಹೆಚ್ಚಾಗಿದ್ದರಿಂದ ಸ್ಕೂಟರ್ ಆಫ್ ಆಗಿ ಕೆಳಗೆ ಬೀಳುವಾಗ, ಸಹಾಯಕ್ಕಾಗಿ ತನ್ನ ಬಲ ಭಾಗದಲ್ಲೇ ಇದ್ದ ವಿದ್ಯುತ್ ಕಂಬವನ್ನು ಅಖಿಲಾ ಮುಟ್ಟಿದ್ದಾರೆ. ಈ ವೇಳೆ ವಿದ್ಯುತ್ ಸ್ಪರ್ಶವಾಗಿ ಅಖಿಲಾ ಕೊನೆಯುಸಿರೆಳೆದಿದ್ದಾರೆ. ಅದಕ್ಕೂ ಮುನ್ನ ಕೆಳಗೆ ಬಿದ್ದಿದ್ದ ಆಕೆಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಅಖಿಲಾ ಪ್ರಾಣ ಬಿಟ್ಟಿದ್ದಾರೆ.
ಬೆಸ್ಕಾಂ ಮತ್ತು ಬಿಬಿಎಂಪಿ ನಿರ್ಲಕ್ಷ್ಯವೇ ಅಖಿಲಾ ಸಾವಿಗೆ ಕಾರಣ ಎಂದು ಆರೋಪಿಸಲಾಗಿದೆ. ವಿದ್ಯುತ್ ಕಂಬಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದೇ ಆಖಿಲಾ ಸಾವಿಗೆ ಕಾರಣ ಎಂದು ಪಾಲಕರು ಮತ್ತು ಸ್ಥಳೀಯರು ಆರೋಪ ಮಾಡಿದ್ದಾರೆ. ಇಷ್ಟೆಲ್ಲಾ ಆದ್ರು ಘಟನಾ ಸ್ಥಳಕ್ಕೆ ಭೇಟಿ ನೀಡದ ಬಿಬಿಎಂಪಿ, ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
ಘಟನಾ ಸ್ಥಳಕ್ಕೆ ವೈಟ್ ಫೀಲ್ಡ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತದೇಹವನ್ನು ವೈದೇಹಿ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಪರೀಕ್ಷೆ ಬಳಿಕ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗಿದೆ. (ದಿಗ್ವಿಜಯ ನ್ಯೂಸ್)