ಜಿಲ್ಲೆ

ಫುಡ್​ ಡೆಲಿವರಿ ಮಾಡುವುದು ತಡವಾಗ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬಿದ ಮಹಿಳೆ

ಬೆಂಗಳೂರು: ಫುಡ್​ ಡೆಲಿವರಿ ಮಾಡುವುದು ತಡವಾಗುತ್ತಿದೆ ಎಂದಿದ್ದಕ್ಕೆ ಡೆಲಿವರಿ ಬಾಯ್​ ಕುತ್ತಿಗೆ ಹಿಡಿದು ಹೊರದಬ್ಬುವ ಮೂಲಕ ಮಹಿಳೆಯೊಬ್ಬಳು ದಬ್ಬಾಳಿಕೆ ನಡೆಸಿರುವ ಘಟನೆ ನಗರದ ವೈಟ್​ಫೀಲ್ಡ್ ಬಳಿಯ ಲಿಯಾನ್ ಗ್ರಿಲ್ ರೆಸ್ಟೋರೆಂಟ್​ನಲ್ಲಿ ನಿನ್ನೆ (ಡಿ.23) ನಡೆದಿದೆ.

ಸಂಜಯ್ ಹೆಸರಿನ ಡೆಲಿವರಿ ಬಾಯ್ ಫುಡ್ ಪ್ಯಾಕೇಟ್ ಪಡೆಯಲು ಲಿಯಾನ್ ಗ್ರಿಲ್ ರೆಸ್ಟೋರೆಂಟ್​ಗೆ ಬಂದಿದ್ದ. ಈ ವೇಳೆ ಪುಡ್ ಪ್ಯಾಕೆಟ್ ಕೊಡಲು ತಡಮಾಡಿದ್ದಕ್ಕೆ ಆತ ಪ್ರಶ್ನಿಸಿದ್ದಾನೆ. ನೀವು ಈ ರೀತಿ ತಡಮಾಡಿದರೆ, ಗ್ರಾಹಕರಿಗೆ ತಲುಪಿಸುವುದು ಕೂಡ ವಿಳಂಬವಾಗುತ್ತಿದೆ ಎಂದಿದ್ದ. ಇದರಿಂದ ಸಿಟ್ಟಾದ ಮಹಿಳಾ ಸಿಬ್ಬಂದಿ ಆತನ ಮೇಲೆ ದಬ್ಬಾಳಿಕೆ ನಡೆಸಿದ್ದಾಳೆ. ಪರಸ್ಪರ ಮಾತಿಗೆ ಮಾತು ಬೆಳೆದು ಡೆಲಿವರಿ ಬಾಯ್​ನ‌ ಕುತ್ತಿಗೆ ಪಟ್ಟಿ ಹಿಡಿದ ಮಹಿಳೆ ಆತನನ್ನು ಎಳೆದೊಯ್ದ ರೆಸ್ಟೋರೆಂಟ್​ನಿಂದ ಹೊರದಬ್ಬಿದ್ದಾಳೆ.

ಘಟನೆ ಬಳಿಕ ಸಂಜಯ್​ ಬೆನ್ನಿಗೆ ನಿಂತ ಕನ್ನಡಪರ ಸಂಘಟನೆಗಳು ರೆಸ್ಟೋರೆಂಟ್ ಮಾಲೀಕರನ್ನ‌ ಸಂಪರ್ಕಿಸಿವೆ. ಮ್ಯಾನೇಜರ್ ಪ್ರಶಾಂತ್ ಎಂಬುವರನ್ನು ಭೇಟಿಯಾಗಿ‌ ಮಹಿಳೆಯನ್ನು ವಜಾಗೊಳಿಸಲು ಆಗ್ರಹಿಸಿವೆ. ಮಹಿಳೆಯ ಕೃತ್ಯ ಗಮನಿಸಿದ ಮ್ಯಾನೇಜರ್​ ಮಹಿಳೆಯನ್ನ ಕೆಲಸದಿಂದ ತೆಗೆದು ಹಾಕಿದ್ದಾರೆ. ಅಲ್ಲದೆ, ಡೆಲಿವರಿ‌ ಬಾಯ್​ಗೆ ಒಂದು ದಿನದ ಸಂಬಳ‌ವನ್ನು ಸಂಘಟನೆಗಳು ಕೊಡಿಸಿವೆ. ವೈಟ್ ಫೀಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ದಿಗ್ವಿಜಯ ನ್ಯೂಸ್​)