ಬಳ್ಳಾರಿ: ಆಂಧ್ರ ಪ್ರದೇಶದಲ್ಲಿ ಭಾರೀ ಬೇಡಿಕೆ ಸೃಷ್ಟಿಸಿರುವ ಆನಂದಯ್ಯ ಅವರ ಕರೊನಾ ಔಷಧಿ ರಾಜ್ಯಕ್ಕೂ ಎಂಟ್ರಿ ಕೊಟ್ಟಿದೆ. ಬಳ್ಳಾರಿಯಲ್ಲಿ ಆನಂದಯ್ಯರ ಕರೊನಾ ಔಷಧಿಯನ್ನು ಬಳಸಲಾಗುತ್ತಿದೆ.
ಬಳ್ಳಾರಿ, ಹಂಪಿ, ಕಮಲಾಪುರ ಹಾಗೂ ಆನೆಗುಂದಿ ಸೇರಿದಂತೆ ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಯ ಹಲವು ಕಡೆ ಔಷಧಿ ವಿತರಣೆ ಮಾಡಲಾಗುತ್ತಿದೆ. ಇದರ ನಡುವೆ ರಾಜ್ಯಾದ್ಯಂತ ಔಷಧಿ ಹಂಚಲು ಅನುಮತಿ ಕೋರಿ, ಹಂಪಿ ಸ್ವರ್ಣಶ್ರಾಮದ ಗೋವಿಂದಾನಂದ ಸರಸ್ವತಿ ಸ್ವಾಮೀಜಿಗಳು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಈಗಾಗಲೆ ಸುಮಾರು 12 ಸಾವಿರ ಜನರಿಗೆ ಟ್ರಯಲ್ ಮಾದರಿಯಲ್ಲಿ ಉಚಿತವಾಗಿ ಔಷಧಿ ವಿತರಣೆ ಮಾಡಲಾಗಿದೆ. ಹಂಪಿಯ ಶ್ರೀ ಗೋವಿಂದಾನಂದ ಸರಸ್ವತಿ ಸ್ವಾಮೀಜಿಯವರಿಂದ ಉಚಿತ ವಿತರಣೆಯಾಗಿದೆ.
ಇನ್ನು ಆನಂದಯ್ಯನ ಔಷಧಿಯನ್ನು ಆಂಧ್ರಪ್ರದೇಶದ ಆಯುಷ್ ಇಲಾಖೆ ಅನುಮೋದನೆ ಮಾಡಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿಯೂ ಅನುಮತಿ ನೀಡಬೇಕೆಂದು ಸ್ವಾಮಿಜಿ ಅವರು ಒತ್ತಾಯ ಮಾಡಿದ್ದಾರೆ. ಆನಂದಯ್ಯ ಅವರು ಅಂದಾಜು 5 ಲಕ್ಷದ ಮೌಲ್ಯದ ಆಯುರ್ವೇದ ಔಷಧಿಯನ್ನು ಉಚಿತವಾಗಿ ನೀಡಿದ್ದಾರೆ.
ಆನಂದಯ್ಯ ಅವರು ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣ ಪಟ್ಟಣಂ ನಾಟಿ ವೈದ್ಯ. ಅವರು ತಯಾರಿಸಿರುವ ಕರೊನಾ ಔಷಧಿ ಪಡೆದುಕೊಂಡ ಅನೇಕರು ಆಂಧ್ರದಲ್ಲಿ ಗುಣವಾಗಿರುವ ಹಿನ್ನೆಲೆಯಲ್ಲಿ ಆಂಧ್ರದಲ್ಲಿ ಆನಂದಯ್ಯ ಔಷಧಿಗೆ ಅನುಮೋದನೆ ನೀಡಿದ್ದಾರೆ. (ದಿಗ್ವಿಜಯ ನ್ಯೂಸ್)