ಜಿಲ್ಲೆ

ತಲ್ವಾರ್​ ಹಿಡಿದು ಚರ್ಚ್‌ ಒಳಗೆ ನುಗ್ಗಿದ ಅಪರಿಚಿತನಿಂದ ಫಾದರ್‌ಗೆ ಬೆದರಿಕೆ: ಬೆಳಗಾವಿಯಲ್ಲಿ ಘಟನೆ

ಬೆಳಗಾವಿ: ತಲ್ವಾರ್​ ಹಿಡಿದು ಚರ್ಚ್‌ ಒಳಗೆ ನುಗ್ಗಿದ ಅಪರಿಚಿತ ವ್ಯಕ್ತಿಯೊಬ್ಬ ಫಾದರ್‌ಗೆ ಬೆದರಿಕೆ ಹಾಕಿರುವ ಘಟನೆ ಬೆಳಗಾವಿಯ ಬಾಕ್ಸೈಟ್ ರಸ್ತೆಯಲ್ಲಿರುವ ಸೇಂಟ್ ಜೋಸೆಫ್‌ ದಿ ವರ್ಕರ್ಸ್ ಚರ್ಚ್‌ನಲ್ಲಿ ನಡೆದಿದೆ.

ಫಾದರ್ ಫ್ರಾನ್ಸಿಸ್​ಗೆ ಅಪರಿಚಿತ ವ್ಯಕ್ತಿ ಬೆದರಿಕೆ ಹಾಕಿದ್ದಾನೆ. ಕಾಂಪೌಂಡ್ ಜಿಗಿದು ಮೊದಲ ಮಹಡಿಯ ಮನೆ ಎದುರು ಬಂದಿದ್ದ. ಈ ವೇಳೆ ಆತನಿಂದ ಹೇಗೋ ತಪ್ಪಿಸಿಕೊಂಡು ಫಾದರ್​ ಕೆಳಗಿಳಿದು ಬಂದಿದ್ದಾರೆ. ಬಳಿಕ ಸ್ಥಳೀಯರು ಫಾದರ್ ರಕ್ಷಣೆಗೆ ಧಾವಿಸುತ್ತಿದ್ದಂತೆ ಅಪರಿಚಿತ ವ್ಯಕ್ತಿ ಅಲ್ಲಿಂದ ಪರಾರಿಯಾಗಿದ್ದಾನೆ.

ಅಪರಿಚಿತ ವ್ಯಕ್ತಿ ತಲ್ವಾರ್ ಹಿಡಿದು ಚರ್ಚ್ ಒಳಗೆ ನುಗ್ಗುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ವ್ಯಕ್ತಿಯ ಕೈಯಲ್ಲಿ ತಲ್ವಾರ್ ನೋಡುತ್ತಿದ್ದಂತೆ ಫಾದರ್​ ಹೊರಗೆ ಓಡಿ ಬಂದಿರವುದು ದೃಶ್ಯದಲ್ಲಿದೆ. ಚರ್ಚ್​​ಗೆ ಸೇರಿದ ಮನೆಯ ಸ್ಟೋರ್ ರೂಮ್‌ನಲ್ಲಿ ಕಳ್ಳತನಕ್ಕೆ ಬಂದಿದ್ದ ಎಂಬ ಶಂಕೆ ವ್ಯಕ್ತವಾಗಿದೆ.

ಎಪಿಎಂಸಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಫಾದರ್ ಪ್ರಾನ್ಸಿಸ್ ಅವರಿಂದ ಘಟನೆಯ ಮಾಹಿತಿ ಪಡೆಕೊಂಡಿದ್ದು, ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ದಿಗ್ವಿಜಯ ನ್ಯೂಸ್​)