ಹುಬ್ಬಳ್ಳಿ: ಕರಸೇವಕ ಶ್ರೀಕಾಂತ ಪೂಜಾರಿ ಬಂಧನ ಖಂಡಿಸಿ ಶಹರ ಪೊಲೀಸ್ ಠಾಣೆ ಎದುರು ಬುಧವಾರ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ ನೇತೃತ್ವದಲ್ಲಿ ಸಾವಿರಾರು ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಮಾಡಿದರು. ಆರ್. ಅಶೋಕ ಸೇರಿ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಪ್ರತಿಭಟನೆ ವೇಳೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಆರ್. ಅಶೋಕ, ಸಿದ್ದರಾಮಯ್ಯ ಸರ್ಕಾರ ಹಿಂದು ವಿರೋಧಿಯಾಗಿದೆ. ನಾವೇನು ಪಾಕಿಸ್ತಾನದಲ್ಲಿ ಇದ್ದೇವಾ? ಕರ್ನಾಟಕದಲ್ಲಿ ರಾಮನ ಜಪ ಮಾಡಿದ್ದೇವೆ. ಇದು ತಪ್ಪಾ ಎಂದು ಪ್ರಶ್ನಿಸಿದರು.
ಹಿಂದು-ಮುಸ್ಲಿಮರ ಮಧ್ಯೆ ಸಿದ್ದರಾಮಯ್ಯ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಅಧಿಕಾ ಸಿಗುವ ಕಡೆ ಓಡಿ ಹೋಗುವ ಜಾಯಮಾನ ಅವರದು. ರಾಹುಲ್ ಗಾಂಧಿ ಮೇಲೆ ಎಷ್ಟು ಕೇಸ್ ಇವೆ. ಜೈಲು ಶಿಕ್ಷೆ ಆಗಿದೆ. ಅಮ್ಮ, ಮಗ ಬೇಲ್ ಮೇಲಿದ್ದಾರೆ. ಹೀಗಿದ್ದಾಗ ಹಳೇ ಪ್ರಕರಣ ರೀಓಪನ್ ಮಾಡಿ ಕರಸೇವಕರನ್ನು ಬಂಧಿಸುವುದು ಸರಿಯಾ ಎಂದು ಪ್ರಶ್ನಿಸಿದರು.
ರಾಮನನ್ನು ಕೆಣಕಿದರೆ ಆಂಜನೇಯ ಬಿಡಲ್ಲ. ನಿಮ್ಮ ಸರ್ಕಾರ ಬಹಳ ದಿನ ಉಳಿಯಲ್ಲ, ಟಿಪ್ಪು ಮತಾಂಧ. ಅವನನ್ನ ವೈಭವೀಕರಣ ಮಾಡುತ್ಯಿದ್ದೀರಿ. ನಿಮ್ಮ ಮನೆ ಸುಡುತ್ತದೆ. ಟಿಪ್ಪು ಅರಸಿ ಹೋದವರು ಸುಟ್ಟು ಹೋಗಿದಾರೆ. ಉಗ್ರ ಹೋರಾಟಕ್ಕೆ ನೀವೇ ನಾಂದಿ ಹಾಡುತ್ತೀರಾ? ಹಿಂದು ಭಕ್ತರ ಜತೆ ನಾವಿದ್ದೇವೆ. 100 ಸಿದ್ದರಾಮಯ್ಯ ಬಂದರೂ ಎದುರಿಸುವ ಶಕ್ತಿ ಇದೆ. ಮುಂದೆ ನಮ್ಮ ಸರ್ಕಾರ ಬರ್ತದೆ. ನೀವೇನ್ ಮಾಡ್ತೀರಾ? ಡೈರಿ ಬರೆದಿಟ್ಟಿರುತ್ತೇವೆ. ಮುಸ್ಲಿಮರ ವಿರೋಧಿಗಳಲ್ಲ ನಾವು. ಅಬ್ದುಲ್ ಕಲಾಂ, ಶಿಶುನಾಳ ಶರೀಫರನ್ನ ಆರಾಧನೆ ಮಾಡಿದೀವಿ ಎಂದು ಆಕ್ರೋಶ ಹೊರಹಾಕಿದರು.