ಬೆಂಗಳೂರು: ತೆಲುಗು ಚಿತ್ರರಂಗದ ಖ್ಯಾತ ಹಿನ್ನೆಲೆ ಗಾಯಕಿ ಹರಿಣಿ ರಾವ್ ತಂದೆಯ ಸಾವಿನ ಹಿಂದೆ ಕೋಟಿ ಕೋಟಿ ಸಾಲದ ವ್ಯವಹಾರವಿದ್ದು, ಇಡೀ ಪ್ರಕರಣ ಇದೀಗ ಸ್ಫೋಟಕ ತಿರುವು ಪಡೆದುಕೊಂಡಿದೆ.
ಹರಿಣಿ ಅವರ ತಂದೆ ಎ.ಕೆ.ರಾವ್ ಕೆಲ ದಿನಗಳಿಂದ ನಾಪತ್ತೆಯಾಗಿದ್ದರು. ಈ ಕುರಿತು ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ನಡುವೆ ನ.22ರ ರಾತ್ರಿ ಯಲಹಂಕ- ರಾಜಾನುಕುಂಟೆ ರೈಲ್ವೆ ಹಳಿ ಮಧ್ಯೆ ಎ.ಕೆ.ರಾವ್ ಶವವಾಗಿ ಪತ್ತೆಯಾಗಿದ್ದರು. ಚಾಕುವಿನಿಂದ ಕೈ ಮತ್ತು ಕುತ್ತಿಗೆಯನ್ನು ಚುಚ್ಚಿದ್ದ ಸ್ಥಿತಿಯಲ್ಲಿ ಶವ ಕಂಡು ಬಂದಿತ್ತು ಮತ್ತು ಪ್ರಕರಣ ನಿಗೂಢತೆಗೆ ಸಾಕ್ಷಿಯಾಗಿತ್ತು.
ಇದೀಗ ಎ.ಕೆ. ರಾವ್ ಸಾವಿನ ಸುತ್ತ 390 ಕೋಟಿ ರೂ. ಕತೆ ಕೇಳಿಬಂದಿದೆ. ಕೆಲ ದಿನಗಳ ಹಿಂದೆ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಖಾಸಗಿ ಕಂಪನಿ ಮಾಲೀಕನಿಗೆ ಎ.ಕೆ. ರಾವ್ ಲೋನ್ ಕೊಡಿಸಲು ಮುಂದಾಗಿದ್ದರು ಎನ್ನಲಾಗಿದೆ. ಡ್ಯಾನಿಯಲ್ ಆರ್ಮ್ ಸ್ಟ್ರಾಂಗ್ ಎಂಬುವರಿಂದ ಇಬ್ಬರಿಗೂ ಸುಮಾರು 390 ಕೋಟಿ ರೂ. ಲೋನ್ ಕೊಡಿಸಲು ಮುಂದಾಗಿದ್ದರು ಎಂದು ತಿಳಿದುಬಂದಿದೆ.
ಆದರೆ, 390 ಕೋಟಿ ರೂ. ಲೋನ್ ನೀಡಲು ಆರ್ಮ್ ಸ್ಟ್ರಾಂಗ್ ಅವರು 5 ಕೋಟಿ 80 ಲಕ್ಷ ರೂ. ಮುಂಗಡ ಬಡ್ಡಿ ಹಣ ಪಡೆದುಕೊಂಡಿದ್ದರು. ಮುಂಗಡ ಬಡ್ಡಿ ಪಡೆದುಕೊಳ್ತಾ ಇದ್ದಂತೆ ಆತ ಪೋನ್ ಸ್ವಿಚ್ ಅಪ್ ಮಾಡಿ ನಾಪತ್ತೆಯಾಗಿದ್ದ. ಬಳಿಕ ಹಣ ಕಳೆದುಕೊಂಡ ಗಿರೀಶ್ ಎಂಬ ರಿಯಲ್ ಎಸ್ಟೇಟ್ ಉದ್ಯಮಿ ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ಆರ್ಮ್ಸ್ಟ್ರಾಂಗ್, ವಿವೇಕಾನಂದ ಹಾಗೂ ರಾಘವ ಎಂಬುವರ ಮೇಲೆ ವಂಚನೆ ಕೇಸ್ ದಾಖಲಿಸಿದ್ದರು. ಇದರ ಭಾಗವಾಗಿ ಎ.ಕೆ.ರಾವ್ ಅವರನ್ನು ಪೊಲೀಸರು ವಿಚಾರಣೆಗೆ ಕರೆದಿದ್ದರು.
ಪೊಲೀಸ್ ವಿಚಾರಣಗೆ ಹಾಜರಾದ ಮರುದಿನವೇ ಎ.ಕೆ. ರಾವ್ ಅವರು ಯಲಹಂಕ ಬಳಿ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದರು. ಸದ್ಯ ಎ.ಕೆ.ರಾವ್ ಸಾವಿನ ಬಗ್ಗೆ ಯಶವಂತಪುರ ರೈಲ್ವೇ ಪೊಲೀಸರಿಂದ ಹಾಗೂ ವಂಚನೆ ಕೇಸ್ ಬಗ್ಗೆ ಸುದ್ದಗುಂಟೆಪಾಳ್ಯ ಪೊಲೀಸ್ರಿಂದ ತನಿಖೆ ತ್ರೀವ್ರಗೊಂಡಿದೆ. (ದಿಗ್ವಿಜಯ ನ್ಯೂಸ್)