ಮಾಗಡಿ: ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಮಧ್ಯಮಾವಧಿಯ ಎಂ.ಎಲ್.-322 ರಾಗಿ ತಳಿಯನ್ನು ಕೃಷಿ ವಿವಿ ಅಭಿವೃದ್ಧಿ ಪಡಿಸಿದ್ದು, ರೈತರು ಬಿತ್ತನೆ ಮಾಡಿ ಲಾಭ ಪಡೆಯಬಹುದು ಎಂದು ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಬೇಸಾಯಶಾಸದ ವಿಜ್ಞಾನಿ ಡಾ.ದಿನೇಶ್ ಎಂ.ಎಸ್. ಹೇಳಿದರು.
ತಾಲೂಕಿನ ಪೆಮ್ಮನಹಳ್ಳಿಯಲ್ಲಿ ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದಿಂದ ಹಮ್ಮಿಕೊಂಡಿದ್ದ ನೂತನ ರಾಗಿ ತಳಿ ಎಂ.ಎಲ್.-322ರ ಕ್ಷೇತ್ರೋತ್ಸವ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಪ್ರಸ್ತುತವಾಗಿ ದೀರ್ಘಾವಧಿ ರಾಗಿ ತಳಿಗಳಾದ ಎಂ.ಆರ್.-1 ಮತ್ತು ಎಂ.ಆರ್.-6 ಬೆಳೆಯುತ್ತಿದ್ದು, ಇವು 125ರಿಂದ 130 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಜುಲೈ ತಿಂಗಳಿನಲ್ಲಿ ಮಳೆ ಕೈಕೊಟ್ಟರೆ ಆಗಸ್ಟ್ ತಿಂಗಳಲ್ಲಿ ಬಿತ್ತನೆಗೆ ಸೂಕ್ತವಾಗಿರುವುದಿಲ್ಲ. ಹಾಗಾಗಿ ರೈತರು ಮುಂಚಿತವಾಗಿ ಅಲಸಂದೆ, ಅವರೆ, ಹೆಸರು ಬೆಳೆದು ನಂತರ ಅದೇ ಭೂಮಿಯಲ್ಲಿ ರಾಗಿಯನ್ನು ಬೆಳೆಯಲು ಸೂಕ್ತವಾಗುವ ಮಧ್ಯಮಾವಧಿಯ ಎಂ.ಎಲ್.-322 ರಾಗಿ ತಳಿಯನ್ನು ಕೃಷಿ ವಿವಿ ಅಭಿವೃದ್ಧಿ ಪಡಿಸಿದ್ದು, ರೈತರು ಬಿತ್ತನೆ ಮಾಡಿ ಲಾಭಪಡೆಯಬಹುದು ಎಂದರು.
ಕೃಷಿ ವಿಶ್ವವಿದ್ಯಾನಿಲಯದ ವಿಸ್ತರಣಾ ನಿರ್ದೇಶಕ ಡಾ.ವೈ.ಎನ್.ಶಿವಲಿಂಗಯ್ಯ ಮಾತನಾಡಿ, ರೈತರು ನೂತನ ತಳಿಗಳನ್ನು ಸೂಕ್ತ ಬೇಸಾಯ ಕ್ರಮದೊಂದಿಗೆ ಬೆಳೆದು ಬಿತ್ತನೆ ಬೀಜವನ್ನು ಸಂರಕ್ಷಿಸಿ ಇತರ ರೈತರಿಗೂ ನೀಡಿ ಹೆಚ್ಚಿನ ಪ್ರದೇಶಕ್ಕೆ ತ್ವರಿತವಾಗಿ ವ್ಯಾಪಿಸಲು ಶ್ರಮಿಸಬೇಕು ಎಂದರು.
ತಳಿ ಅಭಿವೃದ್ಧಿ ಪಡಿಸಿದ ವಿಜ್ಞಾನಿ ಡಾ.ಮೋಹನ್ ರಾವ್ ಮಾತನಾಡಿ, ಎಂ.ಎಲ್.-322 ರಾಗಿ ತಳಿಯು 105ರಿಂದ 110 ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕಾಂಡ ಸದೃಢವಾಗಿದ್ದು, ಬೀಳುವುದಿಲ್ಲ, ಕಾಳಿನ ಗಾತ್ರದೊಡ್ಡದಾಗಿದ್ದು, ಹೆಚ್ಚಿನ ಹೊಟ್ಟಿರುವುದಿಲ್ಲ ಎಂದರು.
ಬೀಜ ಘಟಕದ ಮುಖ್ಯಸ್ಥ ಡಾ.ಮಧುಸೂದನ್ ಮಾತನಾಡಿ, ರೈತರು ಪ್ರಮಾಣಿಕೃತ ಬೀಜ ಉತ್ಪಾದನೆ ಮಾಡಿ ಹೆಚ್ಚಿನ ರೈತರಿಗೆ ಬಿತ್ತನೆ ಬೀಜ ಒದಗಿಸುವುದರ ತೆಗೆ ಉತ್ತಮ ಆದಾಯ ಗಳಿಸಬಹುದೆಂದು ತಿಳಿಸಿದರು.
ಕೇಂದ್ರದ ವಿಜ್ಞಾನಿಗಳಾದ ಡಾ.ದೀಪಾ ಪೂಜಾರ, ಡಾ.ಸೌಜನ್ಯಾ, ***ಎಸ್.ನಾಮದಾರಿ ಸೀಡ್ಸ್‌ನ ಉಪಾಧ್ಯಕ್ಷ ಮಂಜುನಾಥ, ಆತ್ಮ ಸಿಬ್ಬಂದಿ ಹಾಗೂ ಪೆಮ್ಮನಹಳ್ಳಿ ಸುತ್ತಮುತ್ತಲಿನ ರೈತರು ಭಾಗವಹಿಸಿದ್ದರು.
ರೈತರಿಗೆ ತರಬೇತಿ
ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕಿ ಅಂಬಿಕಾ ಮಾತನಾಡಿ, ಮುಂದಿನ ದಿನಗಳಲ್ಲಿ ಎಂ.ಎಲ್.-322 ರಾಗಿ ತಳಿಯನ್ನು ಹೆಚ್ಚಿನ ಪ್ರದೇಶದಲ್ಲಿ ಬೆಳೆಯುವಂತಾಗಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದರು.
ಹಿರಿಯ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ಮಾತನಾಡಿ, ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಗೆ ಕೇಂದ್ರವು ಹಲವಾರು ತರಬೇತಿ ನೀಡಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ರೈತರು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಮಾರ್ಗದರ್ಶನ ಪಡೆದು ಬೆಳೆ ಬೆಳೆದರೆ ಉತ್ತಮ ಆದಾಯ ಗಳಿಸಬಹುದು ಎಂದರು.
ಎಂ.ಎಲ್.-322 ತಳಿ ಲಕ್ಷಣಗಳು
ಈ ತಳಿ 100ರಿಂದ 110ದಿನಗಳಲ್ಲಿ ಕಟಾವಿಗೆ ಬರುತ್ತದೆ. ಕಾಂಡ ಸದೃಢವಾಗಿದ್ದು, ತೆನೆತುಂಬಿದಾಗ ನೆಲಕ್ಕೆ ಬೀಳುವುದಿಲ್ಲ. ಬೆಂಕಿರೋಗದ ಸಹಿಷ್ಣತೆಗುಣ ಹೊಂದಿದ್ದು, ಸದೃಢ ಕಾಳುಗಳಿಂದ ಕೂಡಿದ ಉತ್ತಮ ತಳಿಯಾಗಿದೆ. ಹಾಗೆಯೇ ಕಡಿಮೆ ಹೊಟ್ಟು ಹೊಂದಿದ್ದು, ಪ್ರತಿ ಎಕರೆಗೆ 14ರಿಂದ 16 ಕ್ವಿಂಟಾಲ್ ಇಳುವರಿ ನೀಡುವ ಸಾಮರ್ಥ್ಯ ಹೊಂದಿದೆ.