ಉಡುಪಿ: ಹೊರ ರಾಜ್ಯಗಳಿಂದ ಜಿಲ್ಲೆಗೆ ಶನಿವಾರ ಕುಂದಾಪುರ ತಾಲೂಕಿಗೆ 25 ಮಂದಿ ಹಾಗೂ ಉಡುಪಿಗೆ 7 ಮಂದಿ ಆಗಮಿಸಿದ್ದಾರೆ. ಮೇ 4ರಿಂದ 9ರವರೆಗೆ ಒಟ್ಟು 228 ಮಂದಿ ಆಗಮಿಸಿದ್ದು, ಇವರ ಆರೋಗ್ಯ ತಪಾಸಣೆ ಮಾಡಿ ಸರ್ಕಾರಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ತೆಲಂಗಾಣದಿಂದ ಕುಂದಾಪುರಕ್ಕೆ 13 ಪುರುಷರು, 6 ಮಹಿಳೆಯರು, 6 ಮಕ್ಕಳ ಸಹಿತ 25 ಮಂದಿ ಹಾಗೂ ಉಡುಪಿಗೆ ಆಂಧ್ರಪ್ರದೇಶದಿಂದ ಓರ್ವ, ಮಹಾರಾಷ್ಟ್ರದಿಂದ ನಾಲ್ವರು, ಕೇರಳದಿಂದ ಇಬ್ಬರು ಆಗಮಿಸಿದ್ದಾರೆ. ಇವರಲ್ಲಿ ನಾಲ್ವರು ಪುರುಷರು, ಇಬ್ಬರು ಮಹಿಳೆಯರು ಮತ್ತು ಒಂದು ಮಗುವಿದೆ. ಒಟ್ಟು 172 ಮಂದಿ ಪುರುಷರು, 44 ಮಂದಿ ಮಹಿಳೆಯರು, 12 ಮಕ್ಕಳನ್ನು 14 ದಿನಗಳ ನಿಗಾವಣೆಗೆ ದಾಖಲಾಗಿದ್ದು, ಬಳಿಕ ಯಾವುದೇ ಕರೊನಾ ರೋಗ ಲಕ್ಷಣ ಕಂಡುಬರದಿದ್ದರೆ ಮನೆಗೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡಲಿದೆ.
ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಈವರೆಗೆ ಒಟ್ಟು 6266 ಮಂದಿ ನೋಂದಣಿ ಮಾಡಿಕೊಂಡಿದ್ದು, 1860 ಮಂದಿಗೆ ಅನುಮತಿ ನೀಡಲಾಗಿದೆ. ಮಹಾರಾಷ್ಟ್ರ ರಾಜ್ಯದಿಂದ ಗರಿಷ್ಠ ಅರ್ಜಿಗಳು ದಾಖಲಾಗಿದ್ದು, 5115 ಮಂದಿ ನೋಂದಾಯಿಸಿದ್ದಾರೆ. ಇವುಗಳಲ್ಲಿ 1207 ಅರ್ಜಿ ಮಂಜೂರಾಗಿದ್ದು, 3908 ಅರ್ಜಿ ಬಾಕಿ ಇದೆ. ಉಳಿದಂತೆ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಗುಜರಾತ್, ಗೋವಾದಿಂದ ಉಡುಪಿಗೆ ಆಗಮಿಸಲು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.