ಕನಕಪುರ : ನಗರದ ರೂರಲ್ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ತಾಲೂಕು ಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮ ಉದ್ಘಾಟಿಸಿದ ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾನ್ವೇಷಣೆಗೆ ರಸಪ್ರಶ್ನೆ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ. ರಸಪ್ರಶ್ನೆಗಳಿಂದ ವಿದ್ಯಾರ್ಥಿಗಳ ಜ್ಞಾನದ ಜತೆಗೆ ಸಮಯಪ್ರಜ್ಞೆ, ವಿಶ್ಲೇಷಣಾ ಶಕ್ತಿ ಮತ್ತು ಗುಂಪಿನ ಇತರ ಸದಸ್ಯರೊಂದಿಗಿನ ಸಮನ್ವಯತೆ ಅಳೆಯಲು ಮಹತ್ವ ಸಾಧನವಾಗಿದೆ. ಇಂತಹ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸ್ಪರ್ಧಾತ್ಮಕ ಜಗತ್ತಿಗೆ ಮೈಗೂಡಿಕೊಳ್ಳಬೇಕು ಎಂದರು.ಪ್ರೊ.ಎ.ಪಿ.ಪ್ರಕಾಶ್ ಮಾತನಾಡಿ, ವಿದ್ಯಾರ್ಥಿ ಜೀವನ ಭವಿಷ್ಯ ರೂಪಿಸಿಕೊಳ್ಳುವ ಅತ್ಯುತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಗೀಳಿನೊಂದಿಗೆ ಫೇಸ್‌ಬುಕ್, ವಾಟ್ಸ್‌ಆಪ್‌ನಲ್ಲಿ ತೊಡಗಿಸಿಕೊಂಡು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಈ ಗೀಳಿನಿಂದ ಹೊರಬಂದು ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಆರೋಗ್ಯ ಶಿಕ್ಷಣಾಧಿಕಾರಿ ಅರ್ಪಿತಾ, ತಾಲೂಕು ಹಿರಿಯ ನಿರೀಕ್ಷಣಾಧಿಕಾರಿ ಎ.ಪ್ರಕಾಶ್ ಉಪನ್ಯಾಸ ನೀಡಿದರು. ರಸಪ್ರಶ್ನೆಯಲ್ಲಿ ಭಾಗಿಯಾಗಿದ್ದ ಬ್ರಹ್ಮಪುತ್ರ, ಕಾವೇರಿ ಹಾಗೂ ಗಂಗಾ ತಂಡವು ಕ್ರಮವಾಗಿ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ಪಡೆದುಕೊಂಡಿತು.ಉಪನ್ಯಾಸಕರಾದ ಜಯರಾಜು, ತಮ್ಮಣ್ಣ, ಜಗದೀಶ್, ಎನ್ನೆಸ್ಸೆಸ್ ವಿಜೇಂದ್ರ, ಡಾ.ಹನುಮಂತರಾಜು ಇತರರು ಇದ್ದರು.