ಹುಬ್ಬಳ್ಳಿ: ತಂಬಾಕು ಸೇವನೆಯಂಥ ಕೆಟ್ಟ ಅಭ್ಯಾಸ ತೊರೆದು ಆರೋಗ್ಯ ಸಂರಕ್ಷಿಸಿಕೊಳ್ಳಬೇಕು ಎಂದು ಕಿಮ್ಸ್ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಕೆ. ಶಶಿಧರ ಸಲಹೆ ನೀಡಿದರು.
ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾನಿಲಯ, ಭಾರತೀಯ ವೈದ್ಯಕೀಯ ಸಂಸ್ಥೆ ಹುಬ್ಬಳ್ಳಿ ಶಾಖೆ ಸಹಯೋಗದಲ್ಲಿ ನಗರದ ಬಿವಿಬಿ ಕಾಲೇಜ್‌ನ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ವಿಶ್ವ ತಂಬಾಕು ರಹಿತ ದಿನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಂಬಾಕು ಸೇವನೆಯಿಂದ ಆರೋಗ್ಯ ಹಾಳಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತು. ಆದರೆ, ಕೆಲವರು ಈ ಚಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಉತ್ತಮ ಹವ್ಯಾಸ ರೂಢಿಸಿಕೊಂಡರೆ ಹೊರಬರಬಹುದು. ಪುರುಷರಂತೆ ಮಹಿಳೆಯರೂ ಕೂಡ ತಂಬಾಕು ಸೇವನೆ ಚಟಕ್ಕೆ ಬೀಳುತ್ತಿರುವುದು ಕಳವಳ ಮೂಡಿಸಿದೆ ಎಂದರು.
ಎನ್ವಿರಾನ್‌ಮೆಂಟಲ್ ಇಂಜಿನಿಯರಿಂಗ್ ಪ್ರಾಧ್ಯಾಪಕ ಡಾ.ಎಂ.ಆರ್. ಪಾಟೀಲ ಮಾತನಾಡಿ, ಪ್ರಪಂಚದಲ್ಲಿ ಸುಮಾರು 1.25 ಬಿಲಿಯನ್ ವಯಸ್ಕರು ತಂಬಾಕು ಮತ್ತು ಅದರ ಉತ್ಪನ್ನಗಳನ್ನು ಸೇವಿಸುತ್ತಿದ್ದಾರೆ. ಈ ಗುಂಪಿನಲ್ಲಿ 1 ಮಿಲಿಯನ್ ವಯಸ್ಕ ಮಹಿಳೆಯರೂ ಇದ್ದಾರೆ. ಶೇ. 25ರಷ್ಟು ಸಾವುಗಳು ತಂಬಾಕು ಮತ್ತದರ ಉತ್ಪನ್ನಗಳ ಸೇವನೆಯಿಂದ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಐಎಂಎ ಹುಬ್ಬಳ್ಳಿ ಶಾಖೆ ಅಧ್ಯಕ್ಷ ಡಾ. ವೆಂಕಟೇಶ ಮೂಲಿಮನಿ ಮಾತನಾಡಿ, ಭಾರತವು ತಂಬಾಕು ಮತ್ತು ಅದರ ಉತ್ಪನ್ನಗಳಲ್ಲಿ ಎರಡನೇ ಸ್ಥಾನ ಪಡೆದಿದೆ. ತಂಬಾಕು ಸೇವನೆಯಿಂದ ಕ್ಯಾನ್ಸರ್‌ನಂಥ ಗಂಭೀರ ಕಾಯಿಲೆಗಳು ಬರುತ್ತವೆ ಎಂದರು.
ಐಎಂಎ ಕಾರ್ಯದರ್ಶಿ ಡಾ. ಆನಂದ ವರ್ಮಾ ಇತರರು ಇದ್ದರು.