ಜಿಲ್ಲೆ

ಸದ್ದಿಲ್ಲದೆ ಮರಗಳ ಮಾರಣ ಹೋಮ!

ಗಂಗಾಧರ ಬಿ ವಿ

* ಗ್ರಾಮೀಣ ಭಾಗಕ್ಕಿಲ್ಲ ನಿರ್ಬಂಧ

* ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ

ಗಂಗಾಧರ್ ಬೈರಾಪಟ್ಟಣ ರಾಮನಗರ ನಗರ ಪ್ರದೇಶದ ಬೇಡಿಕೆಗಳ ಮರಗಳ ಮಾರಣ ಹೋಮ ಸದ್ದಿಲ್ಲದೆ ನಡೆಯುತ್ತಿದೆ. ಪ್ರತಿ ದಿನ ನಗರದಲ್ಲಿ ಹಲವು ಟ್ರ್ಯಾಕ್ಟರ್‌ಗಳಲ್ಲಿ ಮರಗಳನ್ನು ಸಾಗಿಸುತ್ತಿದ್ದರೂ ಇದರ ಬಗ್ಗೆ ಗಮನ ಹರಿಸದ ಅರಣ್ಯ ಇಲಾಖೆ ಮೌನವಹಿಸಿರುವುದರ ಹಿಂದಿನ ಗುಟ್ಟೇನು ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಗ್ರಾಮೀಣ ಭಾಗಕ್ಕಿಲ್ಲ ನಿರ್ಬಂಧ

ಮರ ಕಡಿಯುವ ನಿಯಮ ಗ್ರಾಮೀಣ ಭಾಗಕ್ಕೆ ಸರಳವಾಗಿವೆ. ಇಲ್ಲಿ ತೇಗ, ಹೊನ್ನೆಯಂತಹ ಬೆಲೆ ಬಾಳುವ ಕೆಲ ಜಾತಿಯ ಮರಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಮರಗಳನ್ನು ಅರಣ್ಯ ಇಲಾಖೆ ಅನುಮತಿ ಇಲ್ಲದೆಯೇ ಕಡಿಯುವ ಅವಕಾಶವನ್ನು ರೈತರಿಗೆ ನೀಡಲಾಗಿದೆ. ಇದರ ಲಾಭವನ್ನು ಪಡೆದುಕೊಂಡಿರುವ ದಲ್ಲಾಳಿಗಳು ಪ್ರತಿ ದಿನ ರೈತರನ್ನು ಪುಸಲಾಯಿಸಿ ಮರಗಳನ್ನು ಗ್ರಾಮೀಣ `ಭಾಗದಿಂದ ಕಡಿದು ನಗರ ಪ್ರದೇಶಕ್ಕೆ ತಂದು ಟನ್ ಲೆಕ್ಕದಲ್ಲಿ ಮಾರಾಟ ಮಾಡುತ್ತಿದ್ದಾರೆ. ಇದರಿಂದಾಗಿ ಗ್ರಾಮೀಣ `ಭಾಗದಲ್ಲಿ ಮರ ಕಡಿಯುವಿಕೆ ನಿರಂತರ ಎನ್ನುವಂತೆ ಆಗಿದೆ.

ಕಾರ್ಖಾನೆಗಳಿಗೆ ರವಾನೆ?

ರಾಮನಗರದಲ್ಲಿ ರೇಷ್ಮೆ ಬಿಚ್ಚಣಿಕೆ ಕೇಂದ್ರಗಳು ಹೆಚ್ಚಿವೆ. ಇದರ ಜತೆಗೆ ಕೆಲವು ಕಾರ್ಖಾನೆಗಳೂ ಇವೆ. ಪ್ರತಿ ದಿನ ಇಲ್ಲಿಗೆ ಸಾವಿರಾರು ಟನ್ ಲೆಕ್ಕದಲ್ಲಿ ಕಟ್ಟಿಗೆ ಅಗತ್ಯವಿದೆ. ಈ ಬೇಡಿಕೆ ಪೂರೈಕೆ ಮಾಡುವ ಸಾಮರ್ಥ್ಯ ಇರುವುದು ಗ್ರಾಮೀಣ ಪ್ರದೇಶಕ್ಕೆ ಮಾತ್ರ. ಈ ಹಿನ್ನೆಲೆಯಲ್ಲಿ ಅನುಮತಿ ಇರುವ ಹಾಗೂ ಇಲ್ಲದಿರುವ ಎಲ್ಲ ಮರಗಳನ್ನು ಕತ್ತರಿಸಿ ತಂದು ಇಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿ ಮರಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ.

ಓವರ್ ಲೋಡ್

ಟ್ರ್ಯಾಕ್ಟರ್‌ಗಳಲ್ಲಿ ಇಂತಿಷ್ಟು ಮಿತಿಯಲ್ಲಿಯೇ ಸಾಗಾಟ ಮಾಡಬೇಕೆನ್ನುವ ನಿಯಮವಿದೆ. ಆದರೆ, ಇದನ್ನು ಮೀರಿ ಹೆಚ್ಚಿನ ಮರಗಳನ್ನು ತುಂಬಿಕೊAಡು ಬರಲಾಗುತ್ತಿದೆ. ಆದರೆ, ಇದನ್ನು ಪ್ರಶ್ನೆ ಮಾಡಬೇಕಾದ ಪೊಲೀಸರಾಗಲಿ, ಸಾರಿಗೆ ಇಲಾಖೆ ಅಧಿಕಾರಿಗಳಾಗಲಿ ಇದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿಲ್ಲ. ಕಣ್ಮುಂದೆಯೇ ಹೆಚ್ಚಿನ ಲೋಡ್ ತುಂಬಿಕೊಂಡು ಹೋಗುತ್ತಿದ್ದರೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಾರೆ ಅಧಿಕಾರಿಗಳು.

ಕಣ್ಮುಚ್ಚಿ ಕುಳಿತ ಇಲಾಖೆ

ರಾಜಾರೋಷವಾಗಿ ಗ್ರಾಮೀಣ ಭಾಗದಲ್ಲಿ ಮರಗಳ ಮಾರಣ ಹೋಮ ಮಾಡಿಕೊಂಡು ನಗರ ಪ್ರದೇಶಕ್ಕೆ ಟ್ರ್ಯಾಕ್ಟರ್‌ಗಳಲ್ಲಿ ಸಾಗಾಟ ಮಾಡುತ್ತಿದ್ದರೂ ಇದನ್ನು ಕಟ್ಟುನಿಟ್ಟಾಗಿ ಗಮನಿಸಬೇಕಾದ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಂತೆ ವರ್ತಿಸುತ್ತಿದೆ. ನಗರದ ಕೆಂಪೇಗೌಡ ವೃತ್ತ, ಐಜೂರು ವೃತ್ತ, ಕನಕಪುರ ವೃತ್ತಗಳಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯ ಕಣ್ಣ ಮುಂದೆಯೇ ಮರಗಳನ್ನು ಸಾಗಣೆ ಮಾಡುತ್ತಿದ್ದರೂ ತಡೆದು ಪ್ರಶ್ನೆ ಮಾಡುವ ಗೋಜಿಗೆ ಹೋಗುವುದಿಲ್ಲ.

ಇದರ ಹಿಂದೆ ದೊಡ್ಡ ಲಾಬಿಯೇ ಇದೆ ಎಂದು ಹೇಳಲಾಗುತ್ತಿದೆ. ಸಿಬ್ಬಂದಿಯ ಕೈ ಬಿಸಿ ಮಾಡಿದರೆ ಖಂಡಿತವಾಗಿ ಟ್ರ್ಯಾಕ್ಟರ್‌ಗಳಲ್ಲಿ ಮರಗಳು ಸಾಗಣೆ ಆಗುತ್ತಿದ್ದರೂ ತಿಳಿದೇ ಇಲ್ಲ ಎನ್ನುವಂತೆ ಸಿಬ್ಬಂದಿ ವರ್ತಿಸುತ್ತಾರೆ ಎನ್ನುವ ಆರೋಪಗಳು ಇದ್ದು, ಇದರ ಬಗ್ಗೆ ಆರ್‌ಎಫ್ಒ, ಎಸಿಎಫ್ ಮತ್ತು ಡಿಸಿಎಫ್ ಗಮನಹರಿಸಬೇಕಿದೆ.

ಗ್ರಾಮೀಣ ಭಾಗದಲ್ಲಿ ಮರ ಕಡಿತಕ್ಕೆ ಹೆಚ್ಚಿನ ನಿಯಮಗಳು ಇಲ್ಲ. ಕೆಲವು ಜಾತಿಯ ಮರಗಳನ್ನು ಹೊರತುಪಡಿಸಿ ಹೆಚ್ಚಿನ ಮರಗಳನ್ನು ಕಡಿಯಬಹುದು. ನಗರ ಪ್ರದೇಶದಲ್ಲಿ ಮರ ಕಡಿತಕ್ಕೆ ಅನುಮತಿ ಕಡ್ಡಾಯ. | ಮೊಹಮ್ಮದ್ ಮನ್ಸೂರ್, ಆರ್‌ಎಫ್‌ಒ, ರಾಮನಗರ ಪ್ರಾದೇಶಿಕ ವಲಯ

---