ಜಿಲ್ಲೆ

ಕೊಡವ ಲ್ಯಾಂಡ್ ಹೋರಾಟಕ್ಕೆ ಶೀಘ್ರ ಜಯ: ನಾಚಪ್ಪ ವಿಶ್ವಾಸ

ಮಡಿಕೇರಿ: ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಪರ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ನಡೆಸುತ್ತಿರುವ ಶಾಂತಿಯುತ ಹೋರಾಟಕ್ಕೆ ಶೀಘ್ರ ಜಯ ಸಿಗಲಿದೆ ಎಂದು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ವಿಶ್ವಾಸ ವ್ಯಕ್ತಪಡಿಸಿದರು.


ಪಾಡಿನಾಡ್-ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ಕುಂಜಿಲ ಕಕ್ಕಬ್ಬೆ ಕೆಂಜರಾಣೆ ಪಾಡಿನಾಡ್‌ಮಂದ್‌ನಲ್ಲಿ ಕೊಡವ ಜಾಗೃತಿ ಸಭೆಯ ಮೂಲಕ ಸಿಎನ್‌ಸಿ ಸಂಘಟನೆಯ ಐದು ಹಂತಗಳ ಪಾದಯಾತ್ರೆಯನ್ನು ಮುಕ್ತಾಯಗೊಳಿಸಿದರು.


ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಕೊಡಗಿನ ಆದಿಮಸಂಜಾತ ಕೊಡವ ಜನಾಂಗಕ್ಕೆ ಸಂವಿಧಾನದಡಿ ಕೊಡವ ಲ್ಯಾಂಡ್ ಜಿಯೋ-ರಾಜಕೀಯ ಸ್ವಾಯತ್ತತೆಯ ಮೂಲಕ ಮಾತ್ರ ಭದ್ರತೆ ಸಿಗಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಕೊಡವ ಲ್ಯಾಂಡ್‌ಗಾಗಿ ಶಾಂತಿಯುತ ಹೋರಾಟ ಮುಂದುವರೆಯಲಿದೆ. ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದ್ದು, ಖ್ಯಾತ ಅರ್ಥಶಾಸ್ತ್ರಜ್ಞ ಹಾಗೂ ಕೇಂದ್ರದ ಮಾಜಿ ಸಚಿವ ಡಾ.ಸುಬ್ರಮಣಿಯನ್ ಸ್ವಾಮಿರವರು ಹೈಕೋರ್ಟ್‌ನಲ್ಲಿ ಈ ಕುರಿತು ಅರ್ಜಿ ಸಲ್ಲಿಸಿ ನಮ್ಮ ಪರವಾಗಿ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಹಿರಿಯರಾದ ಸ್ವಾಮಿ ಅವರು ನಮಗೆ ಸ್ಫೂರ್ತಿಯಾಗಿದ್ದು, ಅವರಿಂದ ಪ್ರೇರಣೆಗೊಂಡು ಅವರ ಜನ್ಮದಿನದಿಂದ ಪಾದಯಾತ್ರೆಯನ್ನು ಆರಂಭಿಸಿ ಇಂದು ಮುಕ್ತಾಯಗೊಳಿಸಿದ್ದೇವೆ. ಇವರ ಮಾರ್ಗದರ್ಶನದಲ್ಲಿ ಕೋಡವ ಲ್ಯಾಂಡ್ ಗಾಗಿ ಕಾನೂನು ಹೋರಾಟ ಕೂಡ ನಡೆಯಲಿದೆ ಎಂದರು.


ಇದೇ ನ.೨೬ ರಂದು ಸಿಎನ್‌ಸಿ ವತಿಯಿಂದ ಕೊಡವ ನ್ಯಾಷನಲ್ ಡೇ ನಡೆಯಲಿದ್ದು, ಕಾರ್ಯಕ್ರಮಕ್ಕೆ ಡಾ.ಸುಬ್ರಮಣಿಯನ್ ಸ್ವಾಮಿರವರು ಆಗಮಿಸಲಿದ್ದಾರೆ. ಸಮಾವೇಶದಲ್ಲಿ ಪ್ರತಿಯೊಬ್ಬ ಕೊಡವ, ಕೊಡವತಿಯರು ಪಾಲ್ಗೊಳ್ಳುವ ಮೂಲಕ ಸಿಎನ್‌ಸಿ ಹೋರಾಟಕ್ಕೆ ಶಕ್ತಿ ತುಂಬಬೇಕು ಎಂದು ಕರೆ ನೀಡಿದರು.


ಆದಿಮಸಂಜಾತ ಕೊಡವ ಜನಾಂಗ ತಮ್ಮ ಪೂರ್ವಜರು ನೀಡಿದ ಪೂಜನೀಯ ಭೂಮಿಯನ್ನು ಅನುಭವಿಸುತ್ತಿದ್ದಾರೆಯೇ ಹೊರತು ಯಾರೂ ದಾನವಾಗಿ ನೀಡಿಲ್ಲ. ಕೊಡಗಿನ ಮೂಲನಿವಾಸಿ ಆದಿಮಸಂಜಾತ ಕೊಡವರ ಮಾತೃಭೂಮಿ ಇದಾಗಿದ್ದು, ಹೊರಗಿನಿಂದ ಬಂದವರು ಅನುಭವಿಸುತ್ತಿರುವ ಭೂಮಿಗೂ, ಕೊಡವರ ಭೂಮಿಗೂ ಅಜಗಜಾಂತರ ವ್ಯತ್ಯಾಸವಿದೆ. ಇಂದು ಕೊಡವರ ಅಜನ್ಮ ಹಕ್ಕಾಗಿರುವ ಜನ್ಮಭೂಮಿ ಪರರ ಪಲಾಗುತ್ತಿದೆ. ಈ ಬಗ್ಗೆ ಕೊಡವರು ಜಾಗೃತಗೊಳ್ಳದಿದ್ದರೆ ಅತ್ಯಂತ ಸೂಕ್ಷ್ಮ ಜನಾಂಗ ಅಪಾಯಕ್ಕೆ ಸಿಲುಕುವ ಆತಂಕವಿದೆ ಎಂದು ಹೇಳಿದರು.


ನಮಗೆ ಸಾಂವಿಧಾನಿಕ ರಕ್ಷಣೆಯನ್ನು ನೀಡುವುದಾಗಿ ಭರವಸೆ ನೀಡಿ ೧೯೫೬ ರಲ್ಲಿ ಕರ್ನಾಟಕ ರಾಜ್ಯದೊಂದಿಗೆ ವಿಲೀನಗೊಳಿಸಿ ನಂತರ ನಮ್ಮನ್ನು ಕಡೆಗಣಿಸುವ ಮೂಲಕ ವಂಚನೆ ಮಾಡಲಾಗಿದೆ. ಸಂವಿಧಾನದ ೭ನೇ ತಿದ್ದುಪಡಿಯಲ್ಲಿ ಪ್ರತಿಪಾದಿಸಲಾದ ರಾಜ್ಯಗಳ ಮರು-ಸಂಘಟನಾ ಕಾಯಿದೆ ೧೯೫೬ ರ ಒಪ್ಪಂದಗಳಿಗೆ ಕರ್ನಾಟಕ ರಾಜ್ಯವು ಬದ್ಧವಾಗಿಲ್ಲ. ಸಿ ರಾಜ್ಯವಾಗಿದ್ದ ಕೂರ್ಗ್ ೧೯೫೬ರಲ್ಲಿ ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೊಡವರನ್ನು ರಾಜ್ಯದ ೨ನೇ ದರ್ಜೆಯ ವರ್ಣಭೇದ ನೀತಿಯ ನಾಗರಿಕರಂತೆ ಪರಿಗಣಿಸಲಾಗಿದೆ. ಇದು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನಾಚಪ್ಪ ಆರೋಪಿಸಿದರು.


ಡಾ.ಸುಬ್ರಮಣಿಯನ್ ಸ್ವಾಮಿರವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿಯ ರಿಟ್ ಅರ್ಜಿ ಸಲ್ಲಿಸಿ ಕೊಡವ ಲ್ಯಾಂಡ್ ಪರವಾಗಿ ಆಯೋಗವನ್ನು ರಚಿಸಬೇಕೆಂದು ಪ್ರತಿಪಾದಿಸಿದ್ದಾರೆ. ಸರ್ಕಾರಗಳು ಈ ಪ್ರಸ್ತಾಪವನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ ಕೊಡವರಿಗೆ ಸಾಂವಿಧಾನಿಕ ಭದ್ರತೆ ನೀಡಬೇಕೆಂದು ಆಗ್ರಹಿಸಿದ ಅವರು, ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಸಿಗದ ಹೊರತು ಕೊಡವರಿಗೆ ಸಾಂವಿಧಾನಿಕ ಭದ್ರತೆ ಮತ್ತು ನ್ಯಾಯಯುತ ಹಕ್ಕುಗಳು ಸಿಗಲು ಸಾಧ್ಯವಿಲ್ಲ ಎಂದು ತಿಳಿಸಿದರು.


ಕೊಡವರನ್ನು ಎಸ್.ಟಿ ಪಟ್ಟಿಗೆ ಸೇರಿಸಬೇಕು. ಕೊಡವ ಜನಾಂಗದ ಸಮಗ್ರ ಕುಲಶಾಸ್ತ್ರ ಅಧ್ಯಯನ ಆರಂಭಿಸಬೇಕು. ಮಾತೃ ಭಾಷೆ ಕೊಡವ ತಕ್ಕ್ ಅನ್ನು ೮ನೇ ಶೆಡ್ಯೂಲ್‌ಗೆ ಸೇರಿಸಬೇಕು. ಸಂವಿಧಾನದ ೩೪೭, ೩೫೦, ೩೫೦ಎ ಮತ್ತು ೩೫೦ಬಿ ವಿಧಿಗಳ ಅಡಿಯಲ್ಲಿ ಪಠ್ಯಕ್ರಮ ಮತ್ತು ಆಡಳಿತದಲ್ಲಿ ಕೊಡವ ತಕ್ಕ್ ಅನ್ನು ಪರಿಚಯಿಸಬೇಕು. ಕೊಡವ ತಕ್ಕ್ ಅನ್ನು ರಾಜ್ಯದ ೩ನೇ ಆಡಳಿತ ಭಾಷೆಯನ್ನಾಗಿ ಪರಿಗಣಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಯುನೆಸ್ಕೋದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪಟ್ಟಿಯಲ್ಲಿ ಸೇರಿಸಬೇಕು. ಕೊಡವ ಜಾನಪದ ಪರಂಪರೆಯನ್ನು ಜೀವಂತಗೊಳಿಸಲು, ವಿಶ್ವ ಕೊಡವಾಲಜಿ (ಕೊಡವ ಶಾಸ್ತ್ರದ ಜಾಗತಿಕ ಸಂಶೋಧನಾ ಅಧ್ಯಯನ ಕೇಂದ್ರ) ಸಂಶೋಧನಾ ಕೇಂದ್ರ ಮತ್ತು ಕೊಡವ ಸುಧಾರಿತ ಅಧ್ಯಯನ ಕೇಂದ್ರವನ್ನು ಸ್ಥಾಪಿಸಲು ಸರ್ಕಾರವು ನಮಗೆ ಭೂಮಿಯನ್ನು ನೀಡಬೇಕು. ಜೀವನದಿ ಕಾವೇರಿಗೆ ಕಾನೂನು ವ್ಯಕ್ತಿ ಸ್ಥಿತಿಯೊಂದಿಗೆ ಜೀವಂತ ಘಟಕವನ್ನು ಸ್ಥಾಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.


ಕಲಿಯಂಡ ಮೀನ, ಪಟ್ಟಮಾಡ ಲಲಿತಾ ಗಣಪತಿ, ನಂದಿನೆರವಂಡ ಪಾರ್ವತಿ, ಚೋಳಪಂಡ ಜ್ಯೋತಿ ನಾಣಯ್ಯ, ಅರೆಯಡ ಸವಿತ, ಕರವಂಡ ಸರಸು, ನಂದಿನೆರವಂಡ ನಿಶಾ ಅಚಯ್ಯ, ನಂದೆಟ್ಟಿರ ಕವಿತಾ ಸುಬ್ಬಯ್ಯ, ಚೀಯಕಪೂವಂಡ ಚಿತ್ರ ರಂಜು, ಬಾಚಮಂಡ ಸೀತಾ ಪೂವಣ್ಣ, ಕಲಿಯಂಡ ಸರಸು ಮಾದಪ್ಪ, ಅಪ್ಪಾರಂಡ ಮೀರಾ ನಂಜಪ್ಪ, ಅಪ್ಪಾರಂಡ ನೀರು ನಂಜಪ್ಪ, ನಂಬುದಮಂಡ ಜೂಬಿ ದೇವಕ್ಕಿ, ಕಲಿಯಂಡ ಪ್ರಕಾಶ್, ಬಾಚಮಂಡ ರಾಜ ಪೂವಣ್ಣ, ದೇಶ ತಕ್ಕ ಪರದಂಡ ಸುಮನ್ ಸುಬ್ರಮಣಿ ಮತ್ತಿತರರು ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾಲ್ಗೊಂಡಿದ್ದರು.