ಮೈಸೂರು: ಪಾರಂಪರಿಕ ಕಟ್ಟಡವಾಗಿರುವ ಲಲಿತಮಹಲ್ ಅರಮನೆ ಕಟ್ಟಡದ ನವೀಕರಣಕ್ಕೆ ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಹೇಳಿದರು.
ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ ಸುಪರ್ದಿಯಲ್ಲಿರುವ ಲಲಿತಮಹಲ್ ಅರಮನೆ ಕಟ್ಟಡ ಪಾರಂಪರಿಕ ಕಟ್ಟಡವಾಗಿದ್ದು, ನಿರ್ವಹಣೆ ಕೊರತೆಯಿಂದಾಗಿ ಶಿಥಿಲಗೊಂಡಿದೆ. ಈ ಹಿನ್ನೆಲೆಯಲ್ಲಿ ನವೀಕರಣ ಸಂಬಂಧ ಸಮಗ್ರ ಯೋಜನಾ ವರದಿ(ಡಿಪಿಆರ್) ಸಿದ್ಧಪಡಿಸುವಂತೆ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಲಾಗಿತ್ತು ಎಂದು ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರಿಯಿಸಿದರು.
ಇಲಾಖೆಯ ಪಾರಂಪರಿಕ ಸಮಿತಿ ಕಟ್ಟಡದ ಬಗ್ಗೆ ಸ್ಥಳ ಪರಿಶೀಲನೆ ನಡೆಸಿ ವರದಿಯನ್ನು ನಮ್ಮ ಇಲಾಖೆಗೆ ನೀಡಿದೆ. ಸರ್ಕಾರಕ್ಕೆ ಡಿಪಿಆರ್ ಸಲ್ಲಿಸಿದ್ದು ಶೀಘ್ರದಲ್ಲಿಯೇ ಟೆಂಡರ್ ಕರೆಯುವ ಮೂಲಕ ಲಲಿತಮಹಲ್ ಕಟ್ಟಡ ನವೀಕರಣಕ್ಕೆ ಚಾಲನೆ ನೀಡಲಾಗುವುದು, ಎಂದು ಹೇಳಿದರು.
ಹಳೇ ಡಿಸಿ ಕಚೇರಿಯಲ್ಲಿ ಮ್ಯೂಸಿಯಂ: ನಗರದ ಹಳೇ ಜಿಲ್ಲಾಧಿಕಾರಿ ಕಚೇರಿಯನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸಿದರೆ ಶೀಘ್ರವೇ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯ ಸ್ಥಾಪಿಸಲಾಗುವುದು. ಕಟ್ಟಡವನ್ನು ಸಂಪೂರ್ಣವಾಗಿ ಹಸ್ತಾಂತರಿಸಿದರೆ ನವೀಕರಣಗೊಳಿಸಲಾಗುವುದು. ಬಳಿಕ ಪುರಾತತ್ವ ಇಲಾಖೆಯ ಬಳಿ ಅತ್ಯಮೂಲ್ಯ ಪ್ರಾಚ್ಯ ವಸ್ತುಗಳನ್ನು ಈ ಪಾರಂಪರಿಕ ಕಟ್ಟಡಕ್ಕೆ ಸ್ಥಳಾಂತರಿಸುವ ಮೂಲಕ ಕಟ್ಟಡ ಸಂರಕ್ಷಣೆಯೊಂದಿಗೆ ಪುರಾತತ್ವ ವಸ್ತುಗಳನ್ನು ರಕ್ಷಣೆ ಮಾಡಲಾಗುವುದು ಎಂದು ಹೇಳಿದರು.
ನಗರಕ್ಕೆ ಬರುತ್ತಿರುವ ಪ್ರವಾಸಿಗರನ್ನು ಮೈಸೂರಿನಲ್ಲಿಯೇ ವಾಸ್ತವ್ಯ ಹೂಡುವಂತೆ ಸಂಜೆ ವೇಳೆ ನಿತ್ಯ ಮನರಂಜನಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಚರ್ಚೆ ನಡೆಯುತ್ತಿದೆ. ಅರಮನೆ ಆವರಣದಲ್ಲಿ ನಿತ್ಯ ಪೊಲೀಸ್ ಬ್ಯಾಂಡ್‌ನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಸೇರಿದಂತೆ ಸಂಬಂಧ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.