ಜಿಲ್ಲೆ

ಕಟ್ಟಡ ಕಾರ್ವಿುಕರ ಖಾತೆಗೆ ಶೀಘ್ರ ಹಣ ಜಮೆ

ವಿಜಯವಾಣಿ ಸುದ್ದಿಜಾಲ ಹಾವೇರಿ

ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಕಾರ್ವಿುಕರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಘೊಷಿಸಿರುವ 1 ಸಾವಿರ ರೂ. ನೆರವಿನ ಹಣವನ್ನು ತ್ವರಿತವಾಗಿ ನೋಂದಾಯಿತ ಎಲ್ಲ ಕಾರ್ವಿುಕರ ಖಾತೆಗೆ ಜಮಾ ಮಾಡಲು ಜಿಲ್ಲಾ ಕಾರ್ವಿುಕ ಅಧಿಕಾರಿಗೆ ಸರ್ಕಾರದ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಕರೊನಾ ನಿಯಂತ್ರಣ ಕ್ರಮಗಳು, ಲಾಕ್​ಡೌನ್​ನಿಂದ ತೊಂದರೆಗೊಳಗಾದವರಿಗೆ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ಅವರು ಮಾತನಾಡಿದರು.

ವಲಸೆ ಕಾರ್ವಿುಕರಿಗೆ, ಅಲೆಮಾರಿಗಳಿಗೆ, ನಿರ್ಗತಿಕರಿಗೆ ಈಗಾಗಲೇ ಆಹಾರ ಕಿಟ್​ಗಳನ್ನು ನೀಡಿದ್ದೀರಿ. ಆದರೆ, ಬಹಳಷ್ಟು ಕಾರ್ವಿುಕರು ಅಡುಗೆ ಎಣ್ಣೆ, ಖಾರದ ಪುಡಿ, ಟೂತ್​ಪೇಸ್ಟ್, ಸಾಬೂನು ಬೇಡಿಕೆಗಳನ್ನು ಸಲ್ಲಿಸುತ್ತಿದ್ದಾರೆ. ದುಡಿಮೆ ಇಲ್ಲದ ಈ ಸಂದರ್ಭದಲ್ಲಿ ಆಹಾರ ಪೊಟ್ಟಣದ ಜೊತೆಗೆ ಅಗತ್ಯ ಸಾಮಗ್ರಿಗಳನ್ನು ನೀಡುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಈ ಚಟುವಟಿಕೆಗಳಿಗೆ ಬೇಕಾದ ರಸಗೊಬ್ಬರ, ಬಿತ್ತನೆ ಬೀಜ, ಕೃಷಿ ಉಪಕರಣಗಳ ವ್ಯವಸ್ಥೆ, ಕೃಷಿ ಚಟುವಟಿಕೆಗೆ ಅಗತ್ಯವಾದ ಸೇವೆಗಳಿಗೆ ತೊಂದರೆಯಾಗದಂತೆ ಕ್ರಮವಹಿಸಬೇಕು. ಕಳಪೆ ಬಿತ್ತನೆ ಬೀಜ ದಾಸ್ತಾನು ಮಾಡಿದ ಕೋಲ್ಡ್ ಸ್ಟೋರೇಜ್ ಸೀಜ್ ಮಾಡಲಾಗಿದೆ. ಈ ಬೀಜಗಳನ್ನು ಬೇರೆಡೆ ಸ್ಥಳಾಂತರಿಸಿ ಕೋಲ್ಡ್ ಸ್ಟೋರೇಜ್​ಗಳನ್ನು ಖಾಲಿ ಮಾಡಿಕೊಡಲು ಕೃಷಿ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಮೆಕ್ಕೆಜೋಳ, ಹತ್ತಿ, ಶೇಂಗಾ ಸೇರಿ ರೈತರ ಉತ್ಪನ್ನಗಳ ಮಾರಾಟಕ್ಕೆ ಯಾವುದೇ ತೊಂದರೆಯಾಗಬಾರದು. ಜಿಲ್ಲೆಯ ಎಲ್ಲ ಕೃಷಿ ಉತ್ಪನ್ನ ಮಾರುಕಟ್ಟೆ ನಿರಂತರ ಚಟುವಟಿಕೆಯಲ್ಲಿರಬೇಕು. ರೈತರ ನೆರವಿಗೆ ತೆರೆದಿರಬೇಕು. ಕ್ವಾರಂಟೈನ್ ಮಾಹಿತಿ, ಮನೆಮನೆ ಆರೋಗ್ಯ ತಪಾಸಣೆ, ತುರ್ತು ಹೆಲ್ತ್ ಚೆಕಪ್ ಮಾಹಿತಿ, ಜಿಲ್ಲೆಯಿಂದ ಲ್ಯಾಬ್​ಗೆ ಕಳುಹಿಸಲಾದ ರಕ್ತ ಮತ್ತು ಗಂಟಲ ದ್ರವದ ಮಾದರಿಗಳ ಸಂಗ್ರಹ ಹಾಗೂ ಲ್ಯಾಬ್​ಗೆ ಕಳುಹಿಸಲು ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ಪಡೆದು, ತ್ವರಿತವಾಗಿ ಸ್ಕ್ರೀನಿಂಗ್ ಕಾರ್ಯವನ್ನು ಪೂರ್ಣಗೊಳಿಸಲು ಸೂಚಿಸಿದರು.

ಸಭೆಯಲ್ಲಿ ಎಸ್​ಪಿ ಕೆ.ಜಿ. ದೇವರಾಜ್, ಜಿಪಂ ಸಿಇಒ ರಮೇಶ ದೇಸಾಯಿ, ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಗಳಾದ ಡಾ. ದಿಲೀಪ ಶಶಿ, ಅನ್ನಪೂರ್ಣ ಮುದಕಮ್ಮನವರ, ಡಿಎಚ್​ಒ ಡಾ. ರಾಜೇಂದ್ರ ದೊಡ್ಡಮನಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ನಾಗರಾಜ ನಾಯ್ಕ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಿ. ಮಂಜುನಾಥ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಿನೋದಕುಮಾರ ಹೆಗ್ಗಳಗಿ ಇತರರು ಉಪಸ್ಥಿತರಿದ್ದರು.

ಶೇ. 95ರಷ್ಟು ಪಡಿತರ ವಿತರಣೆ: ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಾಹಿತಿ ನೀಡಿ, ಜಿಲ್ಲೆಯಲ್ಲಿ ಶೇ. 95ರಷ್ಟು ಪಡಿತರ ವಿತರಣೆಯಾಗಿದೆ. ವಲಸೆ ಕಾರ್ವಿುಕರು, ಅಲೆಮಾರಿಗಳು, ನಿರ್ಗತಿಕರಿಗೆ ಆಹಾರ ಕಿಟ್ ನೀಡಲಾಗಿದೆ. ದಾನಿಗಳು 5 ಸಾವಿರದಷ್ಟು ಕಿಟ್​ಗಳನ್ನು ಪೂರೈಸುವುದಾಗಿ ತಿಳಿಸಿದ್ದಾರೆ. 2 ಸಾವಿರದಷ್ಟು ಕಿಟ್ ಬುಧವಾರ ಬರಲಿವೆ. ಮಠಗಳು, ಸ್ವಯಂ ಸೇವಾ ಸಂಸ್ಥೆಗಳು, ತಹಸೀಲ್ದಾರ್​ಗಳ ಮೂಲಕವೇ ಆಹಾರ ಕಿಟ್ ವಿತರಣೆಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ನೋಂದಾಯಿತ 38 ಸಾವಿರ ಕಾರ್ವಿುಕರಲ್ಲಿ ಈಗಾಗಲೇ 4 ಸಾವಿರ ಕಾರ್ವಿುಕರಿಗೆ ಹಣ ಜಮೆಯಾಗಿದೆ. ಜಿಲ್ಲಾ ಕಚೇರಿಯಿಂದ ಎಲ್ಲರ ಮಾಹಿತಿಯನ್ನು ಕೇಂದ್ರ ಕಚೇರಿಗೆ ಒದಗಿಸಲಾಗಿದೆ. ಬಾಕಿಯಿರುವ 28 ಸಾವಿರ ಫಲಾನುಭವಿಗಳ ಖಾತೆಗೆ ನೆರವಿನ ಹಣ ಜಮೆ ಮಾಡಲು ಖಾತೆದಾರರ ಆಧಾರ್ ಜೋಡಣೆ ಹಾಗೂ ಪರಿಶೀಲನೆ ಕಾರ್ಯ ನಡೆಯುತ್ತಿದ್ದು, ಅವರಿಗೂ ಆದಷ್ಟು ಶೀಘ್ರ ಹಣ ಜಮೆಯಾಗಲಿದೆ.| ಲಲಿತಾ ಸಾತೇನಹಳ್ಳಿ, ಕಾರ್ವಿುಕ ಅಧಿಕಾರಿ