ಜಿಲ್ಲಾಡಳಿತದ ಅನುಮತಿ ಇಲ್ಲದೇ ಅನಗೋಳ ಸಂಭಾಜಿ ಮಹಾರಾಜ ಚೌಕ್‌ನಲ್ಲಿ ಜ.5ರಂದು ಸಂಭಾಜಿ ಮಹಾರಾಜ್ ಪುತ್ಥಳಿ ಅನಾವರಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸೋಮವಾರ ಅನಗೋಳ ಗ್ರಾಮಸ್ಥರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು. ಜ್ಯೋತಿಬಾ ತಾತೂಕರ, ಉಮೇಶ ಕುಳ್ಯಾಳಕರ, ರವಿ ಯಳ್ಳೂರಕರ, ಸಂದೀಪ ಲಾಟೂಕರ ಇತರರಿದ್ದರು. 
ಜಿಲ್ಲೆ

ಶೀಘ್ರ ಶಿಷ್ಟಾಚಾರದಂತೆ ಪುತ್ಥಳಿ ಅನಾವರಣ

ಶಂಕರ ಗೆಜ್ಜಿ

ಬೆಳಗಾವಿ: ಜಿಲ್ಲಾಡಳಿತದ ಅನುಮತಿ ಇಲ್ಲದೇ ಅನಗೋಳ ಸಂಭಾಜಿ ಮಹಾರಾಜ ಚೌಕ್‌ನಲ್ಲಿ ಜ.5ರಂದು ರಾಜಕೀಯ ಸ್ವಾರ್ಥಕ್ಕಾಗಿ ಸಂಭಾಜಿ ಮಹಾರಾಜ್ ಪುತ್ಥಳಿ ಅನಾವರಣ ಮಾಡಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಅನಗೋಳ ಗ್ರಾಮಸ್ಥರು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರಿಗೆ ಮನವಿ ಸಲ್ಲಿಸಿದರು.

ಬಾಕಿ ಇರುವ ಕಾಮಗಾರಿ ಪೂರ್ಣಗಳಿಸಿ, ಗ್ರಾಮದ ಎಲ್ಲ ಮುಖಂಡರು, ನಾಗರಿಕರು, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿಸಿ ಸಭೆ ಮಾಡಿ ಪುತ್ಥಳಿ ಅನಾವರಣಕ್ಕೆ ದಿನಾಂಕ ನಿಗದಿಪಡಿಸುವ ಜ.4ರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಶಾಸಕ ಅಭಯ್ ಪಾಟೀಲ ಅವರು ರಾಜಕೀಯ ಸ್ವಾರ್ಥಕ್ಕಾಗಿ ಜಿಲ್ಲಾಧಿಕಾರಿ ಹಾಗೂ ಪಾಲಿಕೆ ಅಧಿಕಾರಿಗಳ ನಿರ್ಬಂಧಗಳನ್ನು ಉಲ್ಲಂಘಿಸಿ, ಗ್ರಾಮಸ್ಥರನ್ನು ಹೊರತು ಪಡಿಸಿ ಪುತ್ಥಳಿ ಅನಾವರಣ ಮಾಡಿದ್ದಾರೆ. ತಮ್ಮ ಜನರನ್ನು ಕರೆದುಕೊಂಡು ಬಂದು ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇದು ಗ್ರಾಮಸ್ಥರು ಹಾಗೂ ಸಂಭಾಜಿ ಭಕ್ತರ ಭಾವನೆಗಳಿಗೆ ದುಃಖವನ್ನುಂಟು ಮಾಡಿದೆ. ನಿರ್ಬಂಧಗಳನ್ನು ಉಲ್ಲಂಘಿಸಿ ಕಾರ್ಯಕ್ರಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಜ.5ರಂದು ನಡೆದ ಪುತ್ಥಳಿ ಅನಾವರಣದಲ್ಲಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ. ಸರ್ಕಾರದಿಂದ ಅಧಿಕೃತ ದಿನಾಂಕ ಪ್ರಕಟಿಸಿ ಎಲ್ಲ ಶಾಸಕ, ಸಚಿವರು, ಚುನಾಯಿತ ಜನಪ್ರತಿನಿಧಿಗಳು ಸೇರಿ ಎಲ್ಲ ಸಮುದಾಯದ ಮುಖಂಡರನ್ನು ಆಹ್ವಾನಿಸಿ ಅಧಿಕೃತವಾಗಿ ಮತ್ತೊಮ್ಮೆ ಉದ್ಘಾಟಿಸಲಾಗುವುದು. ಈ ಬಗ್ಗೆ ಸರ್ಕಾರದಿಂದ ಮತ್ತೊಮ್ಮೆ ಅನುಮತಿ ಪಡೆದು ಜಿಲ್ಲಾಡಳಿತದಿಂದ ಲೋಕಾರ್ಪಣೆ ಮಾಡಲಾಗುವುದು. ಜತೆಗೆ ಗಣ್ಯರ ಹೆಸರುಗಳ ನಾಮಫಲಕ ಕೂಡ ಅಳವಡಿಸಲಾಗುವುದು. ಈಗಾಗಲೇ ಲೋಕಾರ್ಪಣೆಗೊಂಡ ಪುತ್ಥಳಿಗೆ ಸುತ್ತ ಬ್ಯಾರಿಕೇಡ್ ಅಳವಡಿಸಲಾಗುವುದು. ಅನಗೋಳ ಗ್ರಾಮಕ್ಕೆ ಭೇಟಿ ನೀಡಿ ಎಲ್ಲರೊಂದಿಗೆ ಶೀಘ್ರದಲ್ಲೇ ಚರ್ಚಿಸಲಾಗುವುದು ಎಂದು ತಿಳಿಸಿದರು. ಜ್ಯೋತಿಬಾ ತಾತೂಕರ, ಉಮೇಶ ಕುಳ್ಯಾಳಕರ, ರವಿ ಯಳ್ಳೂರಕರ, ಸಂದೀಪ ಲಾಟೂಕರ, ಪಕೀರಾ ಯಳ್ಳೂರಕರ, ರಾಜೀವ್ ದಾಮಕನೇಕರ, ಮನೋಜ ತವರೆ, ಕೇದಾರಿ ಜಾಧವ ಇತರರಿದ್ದರು.