ಮುಳಬಾಗಿಲು: ಗೃಹಲಕ್ಷ್ಮೀ ಹಾಗೂ ಅನ್ನಭಾಗ್ಯ ಯೋಜನೆಯಡಿ ಮನೆ ಯಜಮಾನಿಯ ಖಾತೆಗೆ ಹೆಚ್ಚುವರಿ ಪಡಿತರ ಹಣ ಪಡೆಯಲು ನೋಂದಣಿ ಮಾಡಿಸಲು ಮಹಿಳೆಯರು ಪ್ರತಿನಿತ್ಯ ಪರದಾಡುವಂತಾಗಿದೆ. ಹೀಗಾಗಿ ಸರ್ಕಾರ ನಿಗದಿಪಡಿಸಿರುವ ನೋಂದಣಿ ಕೇಂದ್ರಗಳ ಮುಂದೆ ಬೆಳಗ್ಗೆ 7ಕ್ಕೆ ಮಹಿಳೆಯರ ಸರತಿಸಾಲಿನಲ್ಲಿ ನಿಲ್ಲುವುದು ಕಂಡುಬಂದಿದೆ.
ನೋಂದಣಿ ಮಾಡುವಾಗ ಆಧಾರ್ಗೆ ಮೊಬೈಲ್ ಸಂಖ್ಯೆ ಲಿಂಕ್ ಆಗದೇ ಇದ್ದರೆ ಮತ್ತು ಆ ಸಂಖ್ಯೆ ಬದಲಾಗಿದ್ದರೆ ಅಂತಹವರು ಮತ್ತೇ ಆಧಾರ್ ಸೆಂಟರ್ಗಳಿಗೆ ತೆರಳಿ ಹೊಸ ಮೊಬೈಲ್ ಸಂಖ್ಯೆಗಳನ್ನು ನೋಂದಾಯಿಸಿಕೊಂಡು ಸೇವಾ ಕೇಂದ್ರಗಳಿಗೆ ಬರಬೇಕಾಗಿದೆ. ಇದರಿಂದ ಮಹಿಳೆಯರಿಗೆ ಹತ್ತಾರು ಬಾರಿ ಸುತ್ತಾಡುವ ಭಾಗ್ಯ ಸಿಕ್ಕಿದ್ದು ಕೂಲಿ ಬಿಟ್ಟು ತಿರುಗಾಡುವಂತಾಗಿದೆ. ಮಧ್ಯಾಹ್ನ ಊಟದ ಸಮಯದಲ್ಲಿ ಕೇಂದ್ರಗಳು ಬಾಗಿಲು ಮುಚ್ಚಿದಾಗಲೂ ಮಹಿಳೆಯರು ಅಲ್ಲಿಯೇ ಕೂತು ಕ್ಯೂ ಬಿಡದೆ ತಮ್ಮ ಹೆಸರನ್ನು ನೋಂದಾಯಿಸುವ ಧಾವಂತದಲ್ಲಿದ್ದು ಸರ್ವರ್ ಸಮಸ್ಯೆ ಮತ್ತಿತರ ತಾಂತ್ರಿಕ ಸಮಸ್ಯೆಗಳಿಂದ ಮತ್ತೆಮತ್ತೆ ಸುತ್ತಾಡಬೇಕಾಗಿದೆ.
ನೋಂದಣಿ ತಲೆನೋವು: ಗೃಹಲಕ್ಷ್ಮೀ ಯೋಜನೆಗೆ ಗ್ರಾಮ ಒನ್, ವಿವಿಧ ಸೇವಾ ಕೇಂದ್ರಗಳು ಸೇರಿ ಗ್ರಾಪಂಗಳಲ್ಲಿ ನೋಂದಾಯಿಸಲು ಅವಕಾಶ ಕಲ್ಪಿಸಲಾಗಿದೆ. ಈಗ ಅಧಾರ್ ಕಾರ್ಡ್ ನೋಂದಾಯಿತ ಮೊಬೈಲ್ ಇಲ್ಲದೆ ಹಲವು ಮಹಿಳೆಯರು ಪರದಾಡುತ್ತಿದ್ದಾರೆ. ಅಧಾರ್ಗೆ ಹೊಸ ೋನ್ ನಂಬರ್ ಲಿಂಕ್ ಮಾಡಿಸಿ ನಂತರ ಗೃಹಲಕ್ಷಿ$್ಮ ಯೋಜನೆ ನೋಂದಣಿಗೆ ಮುಂದಾಗಬೇಕಾಗಿದೆ. ಇದಲ್ಲದೆ ಅನ್ನಭಾಗ್ಯ ಯೋಜನೆಯಲ್ಲಿ 5 ಕೆಜಿ ಹೆಚ್ಚುವರಿ ಪಡಿತರ ಅಕ್ಕಿಗೆ ಹಣ ಪಡೆಯಲು ಮನೆ ಯಜಮಾನಿಯರು ಇನ್ಆ್ಯಕ್ಟೀವ್ ಬ್ಯಾಂಕ್ ಖಾತೆಯನ್ನು ಸಕ್ರಿಯಗೊಳಿಸಲು ಬ್ಯಾಂಕ್ಗಳಿಗೆ ತಡಕಾಡಬೇಕಾಗಿದೆ. ಈಗ ಸಕ್ರಿಯಗೊಳಿಸಲು ಬ್ಯಾಂಕ್ನವರು ಪಾನ್ಕಾರ್ಡ್ ಕಡ್ಡಾಯಗೊಳಿಸುತ್ತಿದ್ದು ಬೇರೆ ಬ್ಯಾಂಕ್ನಲ್ಲಿ ಶೂನ್ಯ ಖಾತೆ ಮಾಡಿಸಿದರೂ ಹಳೇ ಖಾತೆಗೆ ಅಧಾರ್ ಲಿಂಕ್ ಆಗಿದ್ದರೆ ಈ ಹೊಸ ಬ್ಯಾಂಕ್ ಖಾತೆಗೆ ಹಣ ಜಮಾವಣೆ ಆಗುವುದಿಲ್ಲ. ಹೀಗಾಗಿ ಮತ್ತೆ ಹಳೇ ಖಾತೆಯನ್ನು ಸಕ್ರಿಯಗೊಳಿಸಬೇಕಾಗಿದೆ.
ಗೃಹಜ್ಯೋತಿ ಯೋಜನೆಯನ್ನು ಸೈಬರ್ ಸೆಂಟರ್ ಮತ್ತು ಮೊಬೈಲ್ನಲ್ಲಿ ನೋಂದಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದ್ದು ಇದು ಮಾತ್ರ ಸುಲಭವಾಗಿದ್ದು, ಶಕ್ತಿ ಯೋಜನೆಯಲ್ಲಿ ಮಹಿಳೆಯರಿಗೆ ಬಸ್ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಬಸ್ಗಳ ಸಂಖ್ಯೆ ಕಡಿಮೆ ಇರುವುದರಿಂದ ಬಸ್ ಹತ್ತಲು ಇಳಿಯಲು ನೂಕುನುಗ್ಗಲು ನಿಂತೇ ಪ್ರಯಾಣಿಸುವ ಭಾಗ್ಯವೂ ಒದಗಿದೆ.
4,384 ಅರ್ಜಿ ನೋಂದಣಿ
ಮುಳಬಾಗಿಲು ತಾಲೂಕಿನಲ್ಲಿ ಜು.20 ರಿಂದ ಗೃಹಲಕ್ಷಿ$್ಮ ಯೋಜನೆಯಲ್ಲಿ ಅರ್ಜಿ ನೋಂದಣಿಗೆ 61 ಕೇಂದ್ರಗಳನ್ನು ತೆರೆಯಲಾಗಿದೆ. 20ರಂದು 121, 21 ರಂದು 1987, 22ರಂದು 3,206, 24ರಂದು 3776, 25 ರಂದು 3,845, 26ರಂದು 2877, 27ರಂದು 1449 ಒಟ್ಟು 14,384 ಅರ್ಜಿಗಳು ಮನೆ ಯಜಮಾನಿಯರು ಇದುವರೆಗೂ ನೋಂದಾಯಿಸಿದ್ದು ಸರ್ಕಾರಿ ರಜೆ ದಿನಗಳಲ್ಲಿ ಹೊರತುಪಡಿಸಿ ಉಳಿದ ದಿನಗಳಲ್ಲಿ ಅರ್ಜಿ ನೊಂದಾಯಿಸಲು ಅವಕಾಶವಿದ್ದು ಕಾಯುವ ಭಾಗ್ಯ, ಕ್ಯೂ ನಿಲ್ಲುವ ಭಾಗ್ಯ ಮಹಿಳೆಯರಿಗೆ ಒದಗಿಬಂದಿದೆ.
ಪ್ರತಿ ಸೇವಾ ಕೇಂದ್ರಗಳಲ್ಲಿ ಪ್ರತಿದಿನ 60 ಅರ್ಜಿಗಳನ್ನು ನೋಂದಾಯಿಸಲು ಗುರಿ ನೀಡಲಾಗಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳು ಹೊರತುಪಡಿಸಿ ಹಂತಹಂತವಾಗಿ ಸರಿಹೋಗುತ್ತಿದೆ. ಯಾವುದೇ ಕಾರಣಕ್ಕೂ ಫಲಾನುಭವಿಗಳು ಸೇವಾ ಕೇಂದ್ರಗಳಲ್ಲಿ ಹಣ ನೀಡಬಾರದು. ಒತ್ತಾಯ ಮಾಡಿದರೆ ತಾಲೂಕು ದೂರು ಸಲ್ಲಿಸಿ ಸೇವಾ ಕೇಂದ್ರದ ಸಿಬ್ಬಂದಿ ಹಣವನ್ನು ಸ್ವೀಕರಿಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಬಿ.ಆರ್.ಮುನಿವೆಂಕಟಪ್ಪ,ತಹಸೀಲ್ದಾರ್, ಮುಳಬಾಗಿಲು
ಗೃಹಲಕ್ಷ್ಮೀ ಯೋಜನೆ ಅರ್ಜಿ ನೋಂದಾಯಿಸಲು ಹರಸಾಹಸ ಪಡಬೇಕಾಗಿದೆ ಬೆಳಗ್ಗೆ ಕ್ಯೂನಲ್ಲಿ ನಿಲ್ಲಬೇಕು. ಮಧ್ಯಾಹ್ನ ಊಟಕ್ಕೆ ಹೋದಾಗಲೂ ಸಾಲುಬಿಟ್ಟು ಹೋಗುವುದಿಲ್ಲ. ಕೊನೆಗೆ ಅಧಾರ್ಗೆ ಮೊಬೈಲ್ ಸಂಖ್ಯೆ ಬ್ಯಾಂಕ್ಗೆ ಅಧಾರ್ ಸಂಖ್ಯೆ ತಾಳಿ ಇಲ್ಲ ಎಂದು ವಾಪಸ್ಸು ಕಳುಹಿಸುತ್ತಾರೆ. ಪ್ರತಿನಿತ್ಯ ಕೂಲಿ ಮಾಡಿ ಜೀವನ ಸಾಗಿಸುವವರಿಗೆ ತೊಂದರೆ ಉಂಟಾಗಿದೆ. ಲಕ್ಷ್ಮೀ, ಮುಳಬಾಗಿಲು.
ಕೋಲಾರ: ಗೃಹಲಕ್ಷ್ಮೀ ಯೋಜನೆಯಡಿ ಫಲಾನುಭವಿಗಳ ನೋಂದಣಿ ಜಿಲ್ಲೆಯಲ್ಲಿ ಕಡಿಮೆಯಾಗಿರುವುದರಿಂದ ನೋಂದಣಿಗೆ ಅನುಕೂಲವಾಗುವಂತೆ ನಗರ, ಪುರಸಭೆ, ಪಟ್ಟಣ ಪಂಚಾಯಿತಿಯ ವ್ಯಾಪ್ತಿಗಳಲ್ಲಿ 26 ಗೃಹಲ್ಮ ಯೋಜನೆಯ ನೋಂದಣಿ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಅರ್ಹ ಇರುವ ಎಲ್ಲ ಫಲಾನುಭವಿಗಳು ನಿಮ್ಮ ಹತ್ತಿರದ ನೊಂದಣಿ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಅಕ್ರಂಪಾಷಾ ತಿಳಿಸಿದ್ದಾರೆ.
ಗೃಹಲಕ್ಷಿ$್ಮ ಯೋಜನೆಯ ಫಲಾನುಭವಿ ನೋಂದಣಿಯನ್ನು ಜು. 20ರಿಂದ ಆರಂಭಿಸಲಾಗಿದೆ. ಅರ್ಜಿದಾರರು ಪಡಿತರ ಚೀಟಿಯಲ್ಲಿ ಯಜಮಾನಿ ಮಹಿಳೆ ಎಂದು ಗುರುತಿಸಿರುವ ಮಹಿಳೆಯು ಯೋಜನೆ ಫಲಾನುಭವಿಯಾಗಿರುತ್ತಾರೆ. ಆದರೆ ಯಜಮಾನಿ ಹಾಗೂ ಅವರ ಪತಿ ಆದಾಯ ತೆರಿಗೆ ಅಥವಾ ಜಿ.ಎಸ್.ಟಿ. ಪಾವತಿಸುತ್ತಿದ್ದರೆ ಅವರು ಈ ಯೋಜನೆಗೆ ಅರ್ಹರಾಗಿರುವುದಿಲ್ಲ ಎಂದರು.
ಈಗಾಗಲೇ ರೇಷನ್ ಕಾರ್ಡ್ನಲ್ಲಿ ಗುರುತಿಸಲಾಗಿರುವ ಪ್ರತಿಯೊಬ್ಬ ಯಜಮಾನಿ ಮಹಿಳೆಗೂ ದಿನಾಂಕ, ಸಮಯ ಹಾಗೂ ನೋಂದಣಿ ಮಾಡಿಸುವ ಸ್ಥಳದ ವಿವರಗಳನ್ನು ಎಸ್.ಎಂ.ಎಸ್. ಮೂಲಕ ತಿಳಿಸಲಾಗುವುದು. ಯೋಜನೆಯಡಿ ನೋಂದಾಯಿಸಿಕೊಳ್ಳಲು ಪಡಿತರ ಚೀಟಿ ಸಂಖ್ಯೆ, ಆಧಾರ್ ಕಾರ್ಡ್ ಸಂಖ್ಯೆ, ಪತಿಯ ಆಧಾರ್ಕಾರ್ಡ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯ ಪಾಸ್ಬುಕ್ (ಆಧಾರ್ ನಂಬರ್ ಜೋಡಣೆಯಾಗಿರುವ ಬ್ಯಾಂಕ್ ಖಾತೆ ಹೊರತುಪಡಿಸಿ, ಪರ್ಯಾಯ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಬಯಸಿದ್ದಲ್ಲಿ, ಸದರಿ ಬ್ಯಾಂಕ್ ಖಾತೆಯ ಪಾಸ್ ಬುಕ್) ಮಾಹಿತಿಯನ್ನು ಕೇಂದ್ರಕ್ಕೆ ನೀಡಬೇಕಾಗುತ್ತದೆ.
ಆಧಾರ್ ಜೋಡಣೆಯಾಗಿರುವ ಫಲಾನುಭವಿ ಖಾತೆಗೆ 2000 ರೂ.ಗಳನ್ನು ಡಿ.ಬಿ.ಟಿ ಮೂಲಕ ಜಮೆ ಮಾಡಲಾಗುವುದು. ಒಂದು ವೇಳೆ ಫಲಾನುಭವಿಗಳು ಇಚ್ಛಿಸಿದಲ್ಲಿ ಮನೆ ಯಜಮಾನಿ ಪರ್ಯಾಯ ಬ್ಯಾಂಕ್ ಖಾತೆ ನೀಡಬಹುದಾಗಿರುತ್ತದೆ. ಸದರಿ ಬ್ಯಾಂಕ್ ಖಾತೆಗೆ ಆರ್.ಟಿ.ಜಿ.ಎಸ್ ಮೂಲಕ ಹಣ ಜಮೆ ಮಾಡಲಾಗುವುದು ಎಂದು ಡಿಸಿ ತಿಳಿಸಿದ್ದಾರೆ.