ತುಮಕೂರು: ನಗರ ಹೊರತುಪಡಿಸಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮದ್ಯ ದಾಸ್ತಾನು ಪರಿಶೀಲನೆ ಬಳಿಕ ಮಧ್ಯಾಹ್ನ ಮದ್ಯ ಮಾರಾಟ ಆರಂಭಿಸಿದ್ದರೂ ಬೆಳಗಿನಿಂದಲೇ ‘ಕ್ಯೂ’ ನಿಂತಿದ್ದ ಮದಿರೆ ಪ್ರಿಯರು ‘ಕ್ವಾರ್ಟರ್’ ಬಾಟ್ಲಿಗಾಗಿ ದಿನವಿಡೀ ನಿಂತ ಜಾಗಬಿಟ್ಟು ಕದಲಿರಲಿಲ್ಲ. ಸೂರ್ಯ ಮುಳುಗುವ ಹೊತ್ತಾದರೂ ಸರತಿ ಸಾಲೂ ಕರಗಲಿಲ್ಲ.
ಮದ್ಯದಂಗಡಿಗೆ ತಳಿರು ತೋರಣ ಕಟ್ಟಿದ ಸಂಭ್ರಮದ ವಾತಾವರಣ ಒಂದೆಡೆ ಕಂಡುಬಂದರೆ, ಮತ್ತೊಂದೆಡೆ ಪರಸ್ಪರ ಅಂತರ ಕಾಯ್ದುಕೊಳ್ಳಲು ಹಾಕಲಾಗಿದ್ದ ಬಾಕ್ಸ್‌ಗಳಲ್ಲಿ ಚಪ್ಪಲಿ, ಬ್ಯಾಗ್‌ಗಳನ್ನು ಇರಿಸಿದ್ದ ದೃಶ್ಯ ಕಂಡು ಬಂತು. ಇನ್ನೂ ಕರೊನಾ ಪ್ರಕರಣಗಳು ದಿನೇದಿನೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಿತ್ತಳೆ ವಲಯದಲ್ಲಿರುವ ತುಮಕೂರಿಗರೂ ಹೊರವಲಯದ ಗ್ರಾಮಾಂತರ ಕ್ಷೇತ್ರದ ಮದ್ಯದಂಗಡಿಗಳಲ್ಲಿ ಸಾಲುಗಟ್ಟಿ ನಿಂತು ಮದ್ಯದ ದಾಹ ನೀಗಿಸಿಕೊಂಡರು.
ವಿಳಂಬ ತಳಮಳ: ಜಿಲ್ಲೆಯಲ್ಲಿ ತುಮಕೂರು ನಗರ ಹೊರತುಪಡಿಸಿ ಎಲ್ಲ ತಾಲೂಕುಗಳಲ್ಲಿ ವೈನ್ ಶಾಪ್‌ಗಳು (ಸಿಎಲ್-2) ಹಾಗೂ ಎಂಎಸ್‌ಐಎಲ್ (ಸಿಎಲ್-11) ಮಳಿಗೆಗಳಲ್ಲಿ ಮಾರಾಟ ಮಾಡಲು ಅವಕಾಶವಿದ್ದು, ಕಂದಾಯ, ಪೊಲೀಸ್ ಹಾಗೂ ಅಬಕಾರಿ ಇಲಾಖೆ ಜಂಟಿಯಾಗಿ ಮದ್ಯ ದಾಸ್ತಾನು ಪರಿಶೀಲನೆಯಲ್ಲಿ ತೊಡಗಿದ್ದರಿಂದ ಸೋಮವಾರ ಬೆಳಗ್ಗೆ ಮದ್ಯಮಾರಾಟ ನಿಗದಿತ ಸಮಯದಲ್ಲಿ ಆರಂಭವಾಗಲಿಲ್ಲ. ಬೆಳಗ್ಗೆಯೇ ಎದ್ದು ಮದ್ಯದಂಗಡಿಗಳ ಮುಂದೆ ಕ್ಯೂನಲ್ಲಿ ನಿಂತಿದ್ದ ಜನರಲ್ಲಿ ತಳಮಳ ಆರಂಭವಾಗಿತ್ತು. ಹೊಟ್ಟೆಗೂ ಹಿಟ್ಟಿಲ್ಲದೆ ಈಗ, ಆಗ ಮದ್ಯದಂಗಡಿಗಳು ಬಾಗಿಲುಗಳು ತೆರೆಯಲಿವೆ ಎಂಬ ನಿರೀಕ್ಷೆಯಲ್ಲಿದ್ದ ಮದ್ಯಪ್ರಿಯರು ಬಿಸಿಲನ್ನೂ ಲೆಕ್ಕಿಸದೆ ಕಾದು ನಿಂತಿದ್ದರು. ಬೆಳಗ್ಗೆಯೇ ಮದ್ಯದಂಗಡಿಗಳ ಮುಂದೆ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಬೆತ್ತದ ರುಚಿ ಕೂಡ ತೋರಿಸಿದರು.
ಜಿಲ್ಲೆಯ ಶೇ.50 ಮಳಿಗೆಗಳಲ್ಲಿ ಮಾರಾಟ: ಜಿಲ್ಲೆಯಲ್ಲಿ 239 ಮದ್ಯದಂಗಡಿಗಳಿದ್ದು, ತುಮಕೂರು ನಗರದ 39 ಮಳಿಗೆಗಳನ್ನು ಹೊರತುಪಡಿಸಿ 100 ಮಳಿಗೆಗಳಲ್ಲಿ ಮೊದಲ ದಿನ ಮದ್ಯಮಾರಾಟ ಆರಂಭವಾಗಿದೆ. 76 ವೈನ್‌ಶಾಪ್‌ಗಳು, 24 ಎಂಎಸ್‌ಐಎಲ್ ಮಳಿಗೆಗಳಲ್ಲಿ ಸಂಜೆ 7ರವರೆಗೆ ಮಾರಾಟ ಮಾಡಲಾಗಿದೆ. ಇನ್ನೂ 2 ದಿನ ದಾಸ್ತಾನು ಪರಿಶೀಲನೆ ನಡೆಯಲಿದ್ದು ಆನಂತರವೇ 200 ಮದ್ಯದ ಮಳಿಗೆಗಳು ಬಾಗಿಲು ತೆರೆಯಲಿವೆ.
ಮಳಿಗೆಗಳಿಗೆ ಮುಗಿಬಿದ್ದ ತುಮಕೂರಿಗರು!: ತುಮಕೂರು ನಗರದಲ್ಲಿ ಮದ್ಯದ ಮಳಿಗೆಗಳು ತೆರೆಯದ ಕಾರಣ ನಗರದ ಹೊರವಲಯದಲ್ಲಿ ವೈನ್‌ಶಾಪ್, ಎಂಎಸ್‌ಐಎಲ್ ಮಳಿಗೆಗಳಿಗೆ ತುಮಕೂರಿಗರು ಮುಗಿಬಿದ್ದಿದ್ದರು. ರಾಷ್ಟ್ರೀಯ ಹೆದ್ದಾರಿ ಮಂಚಕಲ್‌ಕುಪ್ಪೆ ಬಳಿ ವೈನ್‌ಶಾಪ್‌ಗಳು ಹಾಗೂ ಊರ್ಡಿಗೆರೆಯ ಎಂಎಸ್‌ಐಎಲ್ ಮುಂದೆ ಕಿ.ಮೀ.ಗಟ್ಟಲೆ ಸರದಿ ಕಂಡುಬಂತು.
ಜಿಲ್ಲೆಯಲ್ಲಿ ಶೇ.50 ಮದ್ಯಮಳಿಗೆಗಳಲ್ಲಿ ಮದ್ಯ ಮಾರಾಟ ಆರಂಭವಾಗಿದೆ. 76 ವೈನ್‌ಶಾಪ್, 24 ಎಂಎಸ್‌ಐಎಲ್‌ಗಳಲ್ಲಿ ಮದ್ಯ ಮಾರಾಟವಾಗಿದೆ. ದಾಸ್ತಾನು ಪರಿಶೀಲನೆ ವರದಿ ಇನ್ನೂ ಬಂದಿಲ್ಲ. 2 ದಿನಗಳಲ್ಲಿ ಎಲ್ಲ ಮಳಿಗೆಗಳಲ್ಲಿ ಮಾರಾಟ ಅರಂಭವಾಗಲಿದೆ. ಎಸ್.ನಾಗರಾಜಪ್ಪ ಉಪ ಆಯುಕ್ತ, ಅಬಕಾರಿ ಇಲಾಖೆ